ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 4 ವರ್ಷದಿಂದ ಆಗುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅನಗತ್ಯವಾಗಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕ್ಷೇತ್ರದ ಜನರು ಕಿವಿಗೊಡುವುದಿಲ್ಲ. ಜನರಿಗೆ ಅಭಿವೃದ್ಧಿ ಬೇಕಾಗಿದೆಯೇ ಹೊರತು ರಾಜಕೀಯವಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಕ್ಷೇತ್ರದ ವಿವಿಧೆಡೆ ಮಂಗಳವಾರ ರಸ್ತೆ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ನಾನು ರಾಜಕಾರಣವನ್ನು ಚುನಾವಣೆಗಷ್ಟೇ ಸೀಮಿತಗೊಳಿಸಿದ್ದೇನೆ. ಬೇರೆ ಸಮಯದಲ್ಲಿ ಜನರ ಕಷ್ಟ, ಸುಖ ಹಾಗೂ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದಾಗಿ ನಾನು ತೊಟ್ಟ ಸಂಕಲ್ಪದತ್ತ ನಾನು ಮುನ್ನುಗ್ಗುತ್ತಿದ್ದೇನೆ. ಅಭಿವೃದ್ಧಿಯಲ್ಲಿ ಪೈಪೋಟಿ ಮಾಡಿದರೆ ನಾನು ಒಪ್ಪುತ್ತೇನೆ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಕ್ಷೇತ್ರದ ಜನರು ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಯಾರೇ ಆದರೂ ಪ್ರೀತಿ, ವಿಶ್ವಾಸ ಮತ್ತು ಅಭಿವೃದ್ಧಿ ಕೆಲಸಗಳ ಮೂಲಕ ಸಕಾರಾತ್ಮಕ ದೃಷ್ಟಿಕೋನದಿಂದ ಜನರ ಮನಸ್ಸನ್ನು ಗೆಲ್ಲಬೇಕು. ಅದನ್ನು ಬಿಟ್ಟು ಹತಾಶರಾಗಿ ಸುಳ್ಳು ಹೇಳುವವರನ್ನು, ಚುನಾವಣೆ ಹತ್ತಿರ ಬಂದಾಗಷ್ಟೆ ಜನರ ನೆನಪು ಮಾಡಿಕೊಳ್ಳುವವರನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಅಂತವರ ಬಗ್ಗೆ ಯೋಚಿಸದೆ ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಜನರು ಆ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಹೆಬ್ಬಾಳಕರ್ ಮನವಿ ಮಾಡಿದರು.