ಆನೇಕಲ್: ಪತ್ನಿಯನ್ನು (Wife) ಕೊಲೆಗೈದು ಬಿಹಾರದಲ್ಲಿ ಮತ್ತೊಂದು ಮದುವೆಗೆ ಸಿದ್ಧನಾಗಿದ್ದ ವ್ಯಕ್ತಿಯನ್ನು ಮದುವೆ ಮನೆಯಲ್ಲೇ ಸರ್ಜಾಪುರ ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ (Bihar) ಮೂಲದ ಮಹಮದ್ ನಸೀಮ್ (39) ಎಂದು ಗುರುತಿಸಲಾಗಿದೆ. ಆರೋಪಿ ತನ್ನ ಎರಡನೇ ಪತ್ನಿ ರುಮೇಶ್ ಖಾತುನ್‍ಳನ್ನು (22) ಕೊಲೆಗೈದು ಹಗ್ಗದಿಂದ ಕೈ ಕಾಲು ಕಟ್ಟಿ, ಚರಂಡಿಗೆ ಎಸೆದಿದ್ದ. ಬಳಿಕ ಬಿಹಾರಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.
ಶವ ಕೊಳೆತು ದುರ್ವಾಸನೆ ಬಂದ ಬಳಿಕ ಸ್ಥಳೀಯರು ಸರ್ಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಜಾಡು ಹಿಡಿದು ಪೊಲೀಸರು ಬಿಹಾರಕ್ಕೆ ತೆರಳಿದ್ದರು. ಅಲ್ಲಿ ಆರೋಪಿ ಮೂರನೇ ಮದುವೆ ಸಂಭ್ರಮದಲ್ಲಿದ್ದ. ಅಲ್ಲಿಂದಲೇ ಆರೋಪಿಯನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಆರೋಪಿ ತನ್ನ ಹೆಂಡತಿಯ ಶೀಲ ಶಂಕಿಸಿ ಪದೇ ಪದೇ ಹಲ್ಲೆ ಮಾಡುತ್ತಿದ್ದ. ಕಳೆದ ತಿಂಗಳು 11ರ ರಾತ್ರಿ ಸಹ ಇದೇ ವಿಚಾರಕ್ಕೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಿದ್ದ.