ಬೆಳಗಾವಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಎರಡು ವರ್ಷದ ಮಗನೊಂದಿಗೆ ನದಿಗೆ ಹಾರಿ ಮಹಿಳೆಯೊಬ್ಬಳು ಕಣ್ಮರೆಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಳೇ ಫೂಲ್ ಬಳಿ ನಡೆದಿದೆ.
ರುದ್ರವ್ವ ಬಸವರಾಜ್ ಬನ್ನೂರು (30) ಮತ್ತು ಆಕೆಯ ಪುತ್ರ ಶಿವಲಿಂಗಪ್ಪ ಬನ್ನೂರ (2) ನಾಪತ್ತೆಯಾದವರು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರುದ್ರವ್ವ ತನ್ನ ಎರಡು ವರ್ಷದ ಪುತ್ರನ ಜೊತೆಗೆ ಇಡಗುಂಡಿಯಲ್ಲಿನ ತವರು ಮನೆಯಲ್ಲಿ ವಾಸವಿದ್ದಳು. ಆಕೆಯನ್ನು ಮನವೊಲಿಸಿದ್ದ ಬಸವರಾಜ್ ಆಕೆಯನ್ನು ರಾಮದುರ್ಗಕ್ಕೆ ಕರೆದುಕೊಂಡು ಬಂದಿದ್ದ.
ಈ ವೇಳೆ ಆಟೋ ಬಾಡಿಗೆ ಕೊಡಲು ಬಸವರಾಜ್ ಚಿಲ್ಲರೆ ತರಲು ಹೋದಾಗ ಪುತ್ರನ ಜೊತೆಗೆ ರುದ್ರವ್ವ ವೆಂಕಟೇಶ್ವರ ದೇವಸ್ಥಾನದ ಬಳಿ ಇರುವ ಹಳೆ ಫೂಲ್ ನಿಂದ ನದಿಗೆ ಹಾರಿದ್ದಾಳೆ.
ತಾಯಿ-ಮಗು ನದಿಗೆ ಹಾರಿರುವುದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರಾಮದುರ್ಗ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ತಾಯಿ-ಮಗುವಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ