ಬೆಳಗಾವಿ : ಕಳೆದ ನಾಲ್ಕೂವರೆ ವರ್ಷದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಇನ್ನಷ್ಟು ವೇಗ ಪಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಪಂತ ಬಾಳೇಕುಂದ್ರಿ ಗ್ರಾಮದ ಬಾಲಮುಕುಂದ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾಗುವ ಮೊದಲೇ ಗ್ರಾಮೀಣ ಕ್ಷೇತ್ರದ ಸಮಸ್ಯೆಗಳ ಕುರಿತು ಸಂಪೂರ್ಣ ಅಧ್ಯಯನ ಕೈಗೊಂಡಿದ್ದರು. ಆಗಲೇ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರು. ಶಾಸಕರಾದ ನಂತರ ಸರಕಾರ ಯಾವುದೇ ಇದ್ದರೂ ನಿರಂತರ ಪ್ರಯತ್ನದಿಂದ ಸಾವಿರಾರು ಕೋಟಿ ರೂ ಗಳ ಯೋಜನೆಗಳನ್ನು ತಂದರು.
ಈ ನಡುವೆ ಪ್ರವಾಹ, ಕೊರೋನಾ ಮತ್ತಿತರ ಸಮಸ್ಯೆಗಳು ಎದುರಾದವು. ಆದರೆ ಯಾವುದಕ್ಕೂ ಅಂಜದೆ, ತಮ್ಮ ಆರೋಗ್ಯದ ಕುರಿತು ಸಹ ಯೋಚಿಸದೆ ಅವಿಶ್ರಾಂತವಾಗಿ ಕೆಲಸಗಳನ್ನು ಮಾಡಿದರು. ಕಷ್ಟದ ಸಮಯದಲ್ಲಿ ಜನರೊಂದಿಗೆ ನಿಂತರು. ಹಾಗಾಗಿ ಹಳ್ಳಿ ಹಳ್ಳಿಯಲ್ಲಿ ಶಾಸಕರ ಕಾರ್ಯವನ್ನು ಜನ ಪ್ರಶಂಸಿಸುತ್ತಿದ್ದಾರೆ ಎಂದು ವಿವರಿಸಿದರು.
ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಹಲವಾರು ದೊಡ್ಡ ಯೋಜನೆಗಳನ್ನು, ವಿಶೇಷವಾಗಿ ಯುವಕರಿಗೆ ಉದ್ಯೋಗ ಒದಗಿಸುವ ಯೋಜನೆಗಳನ್ನು ತರುವ ಯೋಚನೆ ಇದೆ. ಆ ದಿಸೆಯಲ್ಲಿ ಈಗಾಗಲೆ ಪ್ರಯತ್ನ ನಡೆಸಿದ್ದೇವೆ ಎಂದು ಚನ್ನರಾಜ ತಿಳಿಸಿದರು.
ಇದೇ ವೇಳೆ ಅವರು ಶ್ರೀ ಪಂತ ಮಹಾರಾಜರ ಆಸ್ಥಾನಕ್ಕೆ ಭೇಟಿ ನೀಡಿ ಶ್ರೀ ಪಂತ ಮಹಾರಾಜರ ಭಾವಚಿತ್ರಕ್ಕೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮೈನುದ್ದಿನ ಅಗಸಿಮನಿ, ಅಪ್ಸರ್ ಜಮಾದಾರ, ಗುಲಾಬಿ ಕೋಲಕಾರ, ಪಾರ್ವತಿ, ತಳವಾರ, ಮಲಿಕ್ ಮನಿಯಾರ, ಮಹಮ್ಮದ್ ಜಮಾದಾರ, ಉಮೇಶರಾವ್ ಜಾಧವ್, ಹೊನಗೌಡ ಪಾಟೀಲ, ಸುರೇಶ ಕಾಳೋಜಿ, ರಸೂಲ ಮಕಾನದಾರ, ನೂರ್ ಹಾಜಿಸಾಬ್ ಮುಲ್ಲಾ, ಜಮೀಲ ಕಾಜಿ, ಶಶಿಕಲಾ ಕದಂ, ಮಾರುತಿ ತಳವಾರ, ಮಂಜುನಾಥ ಪ್ರಭಾತ್, ಸಂಜು ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.