ಯಮಕನಮರಡಿ: ಯಮಕನಮರಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಸಿದ್ಧವಾಗಿದ್ದೇನೆ. ಕ್ಷೇತ್ರವನ್ನು ಮತ್ತೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಮೂಲಕ ನಿಮ್ಮ ಆಶೋತ್ತರಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಶಹಾಬಂದರ್ ಕ್ರಾಸ್ ನ ವಾಲ್ಮೀಕಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮತಕ್ಷೇತ್ರದ ಮತದಾರರಿಗೆ, ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಕಳೆದ 15 ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕುಡಿಯಲು ನೀರು, ರಸ್ತೆಗಳು ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿದ್ದರಿಂದ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಕ್ಷೇತ್ರದಲ್ಲಿ ನನಗೆ ಹೆಚ್ಚು ಮತಗಳನ್ನು ನೀಡಿದ ಮತದಾರರಿಗೆ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದ ಕಾರ್ಯಕರ್ತರಿಗೂ ಇದೇ ವೇಳೆ ಧನ್ಯವಾದ ತಿಳಿಸಿದರು.
ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ಲೋಕೋಪಯೋಗಿ ಇಲಾಖೆಯ ಸಚಿವರಾಗಿ ಪ್ರಥಮ ಬಾರಿಗೆ ಶಹಾಬಂದರ್‌ಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಅವರನ್ನು ಕಾರ್ಯಕರ್ತರು ಅದ್ದೂರಿ ರೋಡ್ ಶೋ ನಡೆಸಿ, ಪಟಾಕಿ ಸಿಡಿಸಿ ಜಯಘೋಷ ಹಾಕುವುದರ ಮೂಲಕ ಸ್ವಾಗತ ಕೋರಿದರು.
ಕ್ಷೇತ್ರದ ಕಾಂಗ್ರೆಸ್ ಪಕ್ಷ ದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೂ ಮಾಲೆಗಳನ್ನು ಸಮರ್ಪಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ವೀರಣ್ಣ ಬಿಸಿರೊಟ್ಟಿ, ಅಬ್ದುಲ್ ಗಣಿ ದರ್ಗಾ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಪಂ, ತಾಪಂ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಸಾವಿರಾರು ಸಂಖ್ಯೆಯ ಕಾರ್ಯಕರ್ಯರು ಇದ್ದರು.