ಗೋಕಾಕ: ವೈದ್ಯರ ಬಗ್ಗೆ, ಅವರ ಅಸಾಧಾರಣ ಕಾರ್ಯದ ಬಗ್ಗೆ ಸಮಾಜದಲ್ಲಿ ಗೌರವವಿದೆ. ಹೀಗಾಗಿ ಸಾರ್ವಜನಿಕರು ವೈದ್ಯರನ್ನು ಗೌರವಿಸಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ಶುಭ ಹಾರೈಸಿ ಮಾತನಾಡಿ, ಮಾನವ ಸಂಕುಲದ ಸೇವೆಯಲ್ಲಿ ನಿರತರಾಗಿರುವ ಎಲ್ಲ ವೈದ್ಯರು ಅಮೂಲ್ಯ ಕೊಡುಗೆ ನೀಡಿದ್ದು, ಅವರ ನಿಸ್ವಾರ್ಥ ಸೇವೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ವೃತ್ತಿಬದ್ಧತೆಯ ವೇಳೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ, ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿ ಕರೊನಾ ಕಾಲದಲ್ಲಿ ಸಾಲು-ಸಾಲು ಸವಾಲುಗಳನ್ನು ಎದುರಿಸಿದ್ದಾರೆ. ಸಮಸ್ಯೆಗಳನ್ನು ಬದಿಗೊತ್ತಿ ರೋಗಿಗಳ ರಕ್ಷಣೆಗೆ ಶ್ರಮಿಸಿದ್ದಾರೆ. ಅವರ ಈ ಸಮರ್ಪಣೆ, ನಿಷ್ಠೆ ಜನರಲ್ಲಿ ವಿಶ್ವಾಸ ಮೂಡಿಸಿದೆ. ಅದರ ಪರಿಣಾಮ ಲಕ್ಷಾಂತರ ಜನರು ಕರೊನಾವನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಸೋಂಕಿತರಿಗಿಂತ ಗುಣಮುಖರಾಗಿ ಬಿಡುಗಡೆ ಆಗುತ್ತಿರುವವರ ಸಂಖ್ಯೆ ಹೆಚ್ಚುವಲ್ಲಿ ವೈದ್ಯಲೋಕದ ಶ್ರಮ ಅಪಾರವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೈದ್ಯರೊಂದಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಸಭೆ ನಡೆಸಿದರು. ಸಭೆಯಲ್ಲಿ ವೈದ್ಯರು ಆಸ್ಪತ್ರೆಯ ಕಟ್ಟಡ ಹಾಗೂ ಬೇಕಾಗಿರುವ ಸಿಬ್ಬಂದಿ ಕೊರತೆಯ ಬಗ್ಗೆ ಸಚಿವರ ಗಮನಕ್ಕೆ ತಂದರು. ವೈದ್ಯರ ಬೇಡಿಕೆಯನ್ನು ಆಲಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಕುರಿತು ಆರೋಗ್ಯ ಸಚಿವರ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಗೋಕಾಕ ನಗರದ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿ ಡಾಕ್ಟರ್ ರವೀಂದ್ರ ಆಂಟಿನ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಇದ್ದರು.