Ad imageAd image

ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ

ratnakar
ಬೆಳೆಗಳಿಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ
WhatsApp Group Join Now
Telegram Group Join Now

ಬೆಳಗಾವಿ: ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ವತಿಯಿಂದ (ಆ.17) ಹತ್ತರಗಿ ಬಳಿಯ ಕೃಷಿ ಜಮೀನಿನಲ್ಲಿ ಆಯೋಜಿಸಲಾದ ಸೋಯಾ ಅವರೆ ಬೆಳೆಗೆ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪರಣೆ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ವಿನೂತನ ಪದ್ಧತಿಯಾಗಿದೆ. ರೈತ ಬಾಂಧವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಹೊಸ ತಂತ್ರಜ್ಞಾನ ಬಳಕೆ ಮೂಲಕ ಎಲ್ಲ ರೈತರು ಕೃಷಿ ಚಟುವಟಿಕೆಗಳನ್ನು ಇನ್ನಷ್ಟು ವೇಗವಾಗಿ ನಿರ್ವಹಿಸಲು ಸಹಾಯಕವಾಗಿದೆ. ಇದರಿಂದ ಸಮಯ, ಹಣ ಉಳಿತಾಯವಾಗಲಿದೆ. ಇಂತಹ ವೈಜ್ಞಾನಿಕ ಪದ್ಧತಿಯನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ರೈತರು ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ಮಾತನಾಡಿ, ಸೋಯಾ ಅವರೆ ಬೆಳೆಗೆ ಪೋಷಕಾಂಶಗಳ ಸಿಂಪರಣೆಗೆ ಸುಮಾರು 37 ಡ್ರೋನ್ ಗಳು ಬಳಕೆ ಮಾಡಲಾಗುತ್ತಿದೆ. ರೈತರು ಬೆಳೆದ ವಿವಿಧ ಬೆಳೆಗಳಿಗೆ ಪೋಷಕಾಂಶ ಮತ್ತು ರಸಗೊಬ್ಬರಗಳನ್ನು ಸಿಂಪರಣೆ ಮಾಡಲು ಈ ವಿಧಾನ ಸುಲಭವಾಗಿದೆ ಎಂದು ಹೇಳಿದರು.

ಪ್ರತಿ ಎಕರೆ ಸಿಂಪರಣೆಗೆ ಸುಮಾರು 400 ರುಪಾಯಿ ಖರ್ಚು ತಗಲುತ್ತದೆ. ಡ್ರೋನ್ ಮೂಲಕ ವಿವಿಧ ಬೆಳೆಗಳಿಗೆ ಕೀಟನಾಶಕ, ರಸಗೊಬ್ಬರ ಸಿಂಪರಣೆ ಮಾಡಬಹುದು. ರೈತರಿಗೆ ತಾಂತ್ರಿಕತೆಯ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಆಯಾ ರೈತ ಸಂಪರ್ಕ ಕೇಂದ್ರದಲ್ಲಿ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಡ್ರೋನ್ ಬಳಕೆ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಕಿತ್ತೂರು ಬೈಲಹೊಂಗಲ ಬಾಗೇವಾಡಿಯಲ್ಲಿ ಕಬ್ಬು ಬೆಳೆಗೆ ಈಗಾಗಲೇ ಬಳಕೆ ಮಾಡಲಾಗುತ್ತಿದೆ.

ವಿವಿಧ ಖಾಸಗಿ ಉದ್ಯಮಗಳ ರೈತ ಸ್ನೇಹಿ ಯೋಜನೆ ಇದಾಗಿದೆ. ರೈತರಿಗೆ ತಲುಪಿಸಲು ಕೃಷಿ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಪದ್ಧತಿ ಇದರಿಂದ ರೈತರಿಗೆ ಸಮಯ, ಶ್ರಮ ಉಳಿತಾಯದ ಜೊತೆಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಈ ಕುರಿತು ಕೃಷಿ ಇಲಾಖೆಯಿಂದ ರೈತರಿಗೆ ತಿಳುವಳಿಕೆ ಕೂಡ ಮೂಡಿಸಲಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ರೈತಸ್ನೇಹಿ ಡ್ರೋನ್ ಗಳ ಬಳಕೆ ಕುರಿತು ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಡಾ.ಎಚ್.ಡಿ.ಕೋಳೆಕರ, ಡಾ.ಕೊಂಗವಾಡ, ಹುಕ್ಕೇರಿ ತಹಶೀಲ್ದಾರ ಮಂಜುಳಾ ನಾಯಕ, ರೋಟರಿ ಜಿಲ್ಲಾ ಗವರ್ನರ್ ಶರದ್ ಪೈ, ರೋಟರಿ ಅಧ್ಯಕ್ಷ ಸುಹಾಸ್ ಚಂಡಕ್, ಚೇರಮನ್ ಪ್ರಶಾಂತ ಹಾಲಪ್ಪನವರ, ಡಾ.ಶಿಲ್ಪಾ ಕೋಡಕಣಿ, ಮುಕುಂದ ಬಾಂಗ್, ಡಾ.ಸಂತೋಷ ಪಾಟೀಲ, ಸಂದೀಪ್ ನಾಯ್ಕ, ನಿತೀನ್ ಗುಜ್ಜರ್, ಡಾ.ಶಂಕರ್ ಗೋಯೆಂಕಾ, ಚಂದ್ರಕಾಂತ ಪಾಟೀಲ(ಬೇಡಕಿಹಾಳ) ಮತ್ತಿತರರು ಉಪಸ್ಥಿತರಿದ್ದರು.
****

WhatsApp Group Join Now
Telegram Group Join Now
Share This Article