ಬೆಳಗಾವಿ : ದೂರುಗಳು ಬಾರದಂತೆ, ಸರಳೀಕರಣಗೊಳಿಸುವ ಭಾಗವಾಗಿ ಸರ್ವೆ ಪ್ರಕ್ರಿಯೆಯನ್ನು ಇನ್ನಷ್ಟು ಆಧುನೀಕರಣಗೊಳಿಸಲಾಗುವುದು ಎಂದು ಕಂದಾಯ ಸಚಿವರಾದ ಆರ್.ಅಶೋಕ ಅವರು ಹೇಳಿದರು.
ಪರಿಷತ್ತಿನಲ್ಲಿ ಇಂದು ಸದಸ್ಯರಾದ ಗೋವಿಂದರಾಜು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾವು ಈಗಾಗಲೇ ಸ್ವಾವಲಂಬಿ ಆಪ್ ಮಾಡಿದ್ದೇವೆ. ಭೂ-ಪರಿವರ್ತನೆ ಬಯಸುವವರು ಸ್ಕೆಚ್ ಮಾಡಿಕೊಂಡು ಆಧಾರ್ ನಂಬರ್ ಸಹಿತ ಈ ಸ್ವಾವಲಂಬಿ ಆಪ್‍ಗೆ ಹಾಕಿದಲ್ಲಿ ಅದನ್ನು ಸಬ್ ರಿಜಿಸ್ಟರ್ ಕಚೇರಿಗೆ ಕಳುಹಿಸುತ್ತೇವೆ. ಇಲ್ಲಿ ತಿದ್ದುಪಡಿಗೆ ಅವಕಾಶವಿಲ್ಲ. ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸಲು ತಿಳಿಸಿದ್ದೇವೆ. ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪಿ ಸರ್ವೆ ತೊಂದರೆ ಇತ್ಯರ್ಥಕ್ಕೆ ಕ್ರಮ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಪಿ ಸರ್ವೆ ನಂಬರ್ ತೊಂದರೆಯನ್ನು ಸಹ ಬೇಗ ಸರಿಪಡಿಸಲಾಗುವುದು ಎಂದು ಸಚಿವ ಆರ್.ಅಶೋಕ ಅವರು ಸದಸ್ಯರಾದ ಎಂ.ಎಲ್.ಅನೀಲ್ ಕುಮಾರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕಾನೂನು ತೊಡಕು ಸರಿಪಡಿಸ್ತೇವೆ: ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಅನಾದಿಕಾಲದಿಂದ ಅನುಭವಿಸಿಕೊಂಡು ಬರುತ್ತಿರುವ ಕಾನೆ, ಬಾನೆ, ಕುಮ್ಕಿ ಜಮೀನುಗಳನ್ನು ಮಂಜೂರು ಮಾಡುವ ಬಗ್ಗೆ ನೀತಿಯೊಂದನ್ನು ರೂಪಿಸಲು ಸಕಾರಾತ್ಮಕ ಧೋರಣೆ ಹೊಂದಿದೆ.
ಸದ್ಯದಲ್ಲೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆದು ಸುಧೀರ್ಘ ಚರ್ಚಿಸಿ ಇರುವ ಕಾನೂನು ತೊಡಕುಗಳನ್ನು ಸರಿಪಡಿಸಲಾಗುವುದು ಎಂದು ಸಚಿವರಾದ ಆರ್ ಅಶೋಕ ಅವರು, ಸದಸ್ಯರಾದ ಪ್ರತಾಪ್ ಸಿಂಹ್ ನಾಯಕ ಕೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.