Ad imageAd image

ನನ್ನ ಶಾಲೆ- ನನ್ನ ಜವಾಬ್ದಾರಿ’ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಶಿಕ್ಷಕರ ಸಹಕಾರ ಅತ್ಯಗತ್ಯ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ratnakar
ನನ್ನ ಶಾಲೆ- ನನ್ನ ಜವಾಬ್ದಾರಿ’ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಶಿಕ್ಷಕರ ಸಹಕಾರ ಅತ್ಯಗತ್ಯ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ:ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ‘ನನ್ನ ಶಾಲೆ- ನನ್ನ ಜವಾಬ್ದಾರಿ’ ಎನ್ನುವ ವಿಶಿಷ್ಟ ಯೋಜನೆಯನ್ನು ಸರ್ಕಾರ ರೂಪಿಸಿದ್ದು, ಯೋಜನೆಯನ್ನು ಶಿಕ್ಷಕರು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಲಹೆ ನೀಡಿದ್ದಾರೆ.

ಬೆಳಗಾವಿಯ ಗಾಂಧಿ ಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಿಗೆ ಸೇರಿದರೆ ಸಮಾಜ ಅಥವಾ ಶಾಲೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ವಲಯದ ಅಭ್ಯುದಯಕ್ಕೆ ‘ನನ್ನ ಶಾಲೆ-ನನ್ನ ಜವಾಬ್ದಾರಿ’ ಎಂಬ ವಿಶೇಷ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ; ಇದೊಂದು ಶಾಲಾಭಿವೃದ್ಧಿಗೆ ವಿನೂತನ ಚಿಂತನೆಯಾಗಿದೆ. ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಲು ಹಿರಿಯ ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.

ನಮ್ಮ ಸರಕಾರಿ ಶಾಲೆಗಳು ಸಾಕಷ್ಟು ಮಹಾನ್ ವ್ಯಕ್ತಿಗಳನ್ನು ರೂಪಿಸಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದಂತಹ ಅನೇಕರು ಉದ್ಯಮಿಗಳಾಗಿದ್ದಾರೆ; ಉತ್ತಮ ಉದ್ಯೋಗದಲ್ಲಿದ್ದಾರೆ. ದೇಶ -ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಿಗೆಲ್ಲ ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಆಸಕ್ತಿ ಇದ್ದರೂ ಯಾವ ರೀತಿ ಸಹಾಯ ಮಾಡಬೇಕು ಎನ್ನುವುದು ತಿಳಿದಿರುವುದಿಲ್ಲ. ಹಾಗಾಗಿ, ತಾವು ಓದಿದ ಶಾಲೆಯ ಸ್ಥಿತಿಗತಿ ತಿಳಿದು ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡಬಹುದು. ಅದಕ್ಕೆ ಬೇಕಾದ ಪೂರಕ ಸಹಾಯವನ್ನು ಹಿರಿಯ ವಿದ್ಯಾರ್ಥಿಗಳು ಮಾಡಬಹುದಾಗಿದೆ. ತಂದೆ- ತಾಯಿಯವರ ಹೆಸರಿನಲ್ಲಿ ಶಾಲಾ ಕಟ್ಟಡ, ಕೊಠಡಿ ಕಟ್ಟಿಸುವುದು ಸೇರಿದಂತೆ ಇನ್ನಿತರ ರೀತಿಯಲ್ಲಿ ತಾವು ಕಲಿತ ಶಾಲೆಗೆ ಸಹಾಯ ಮಾಡಲು ದಾನಿಗಳನ್ನು ಶಿಕ್ಷಕರು ಉತ್ತೇಜಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭೂತರಾಮನಹಟ್ಟಿ ಮುಕ್ತಿಮಠದ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ, ಸಾರ್ವಶಿಕ್ಷಣ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕಿ ಲೀಲಾವತಿ ಹಿರೇಮಠ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ದಾಸಪ್ಪನವರ, ಬಿ.ಆರ್.ಸಿ ಎಂ.ಎಸ್ ಮೇದಾರ್, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮು ಗೂಗವಾಡ, ಡಯಟ್ ನ ಪ್ರಾಂಶುಪಾಲ ಬಸವರಾಜ ನಾಲತವಾಡ, ರಮೇಶ್ ಗೋಣಿ, ಡಾ.ಎಚ್ ಆಯ್ ತಿಮ್ಮಾಪುರ, ಶಿಕ್ಷಕರ ಮತ್ತು ಶಿಕ್ಷಕಿಯರ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಸಚಿವರು, ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಅಡುಗೆ ಸಹಾಯಕಿಯರಿಗೆ ಸ್ವ ಸಹಾಯ ಸಂಘಗಳು ತಯಾರಿಸಿದ ಸಮವಸ್ತ್ರಗಳನ್ನು ವಿತರಿಸಿದರು. ಜೊತೆಗೆ ಸಾಧನೆಗೈದ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಗೌರವಿಸಿದರು.

WhatsApp Group Join Now
Telegram Group Join Now
Share This Article