ಬೆಂಗಳೂರು:ಬಾಲ್ಯ ವಿವಾಹವನ್ನು ತಡೆಗಟ್ಟಲು ಪಾಲಕರ ಸಹಕಾರ ಅತ್ಯಗತ್ಯ. ಎಲ್ಲರೂ ಸಹಕರಿಸಿದರೆ ಬಾಲ್ಯವಿವಾಹ ತಡೆಗಟ್ಟಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಂಗಳೂರಿನ ಗೃಹ ಕಚೇರಿಯಲ್ಲಿ ವಿಜಯನಗರ ಜಿಲ್ಲೆ ಭೀಮಾ ಸಂಘ, ಕಿಶೋರಿಯರ ಸಂಘ, ಯುವ ಧ್ವನಿ ಒಳಗೊಂಡ The Concerned for Working Children ಎನ್ನುವ ಸ್ವಯಂ ಸೇವಾ ಸಂಸ್ಥೆಯ ಸದಸ್ಯರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯವಿವಾಹ ತಡೆಯುವುದು ಕೇವಲ ನಮ್ಮ ಇಲಾಖೆಯ ಕೆಲಸವಲ್ಲ. ಹಲವು ಇಲಾಖೆಗಳ ವ್ಯಾಪ್ತಿಗೆ ಬರುತ್ತದೆ. ಬಾಲ್ಯವಿವಾಹಕ್ಕೆ ಮನೆಯ ಆರ್ಥಿಕ ಪರಿಸ್ಥಿತಿ, ಪ್ರೇಮ ವಿವಾಹ, ಸಿನಿಮಾ ಎಫೆಕ್ಟ್ ಕೂಡ ಕಾರಣವಾಗುತ್ತದೆ. ಎಲ್ಲರೂ ಸೇರಿ ಬಾಲ್ಯ ವಿವಾಹ ತಡೆಯಲು ಪ್ರಯತ್ನಿಸೋಣ ಎಂದರು.
ಹದಿಹರೆಯದ ಮಕ್ಕಳ ಹಾಗೂ ಯುವಜನರಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಪೌಷ್ಟಿಕಾಂಶದ ಆಹಾರ ಪದಾರ್ಥಗಳ ವಿತರಣೆ ಹಾಗೂ ಶುಚಿ ಪ್ಯಾಡ್ ಗಳ ವಿತರಣೆ, ಮಕ್ಕಳಿಗೆ ಶಿಕ್ಷಣ ಅಥವಾ ಉದ್ಯೋಗಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ವೇಳೆ ತಂದೆ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕಾಗಿರುವುದು, ಮದ್ಯ ಮಾರಾಟ, ವಿಕಲ ಚೇತನ ಮಕ್ಕಳಿಗೆ ಅಗತ್ಯ ಸೌಲಭ್ಯಗಳ ಕೊರತೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಎನ್ ಜಿಒ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.
ಈ ವೇಳೆ ಸಹ ನಿರ್ದೇಶಕರಾದ ಕೃಪಾ ಎಂ.ಎಂ, ಕಾರ್ಯಕಾರಿ ನಿರ್ದೇಶಕರಾದ ಕವಿತಾ ರತ್ನ, ಸಂಯೋಜಕರಾದ ದೀಪ್ತಿ ಹಾಗೂ ವಿಜಯನಗರದ ಸ್ನೇಹ ಫೌಂಡೇಶನ್, ಸಖಿ ಟ್ರಸ್ಟ್ ಕಾರ್ಯಕರ್ತರು, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕರಾದ ಅಕ್ಕಮಹಾದೇವಿ ಉಪಸ್ಥಿತರಿದ್ದರು.