ಬೆಂಗಳೂರು: ರಾಷ್ಟ್ರೀಯ ನಾಯಕರನ್ನು ಸ್ವಾಗತಿಸುವ ಜವಾಬ್ದಾರಿ ಹೊಂದಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಗಮನ ಸೆಳೆದರು.
ಎಚ್ ಎಎಲ್ ವಿಮಾನನಿಲ್ದಾಣಕ್ಕೆ ತಮ್ಮ ಸಿಬ್ಬಂದಿ ಜೊತೆ ಬೆಳಗ್ಗೆ 10:30ಕ್ಕೆ ಆಗಮಿಸಿದ ಸಚಿವರು, ವಿಐಪಿ ಲಾಂಚ್ ನಲ್ಲಿ ಕೆಲ ಹೊತ್ತು ಸಚಿವರಾದ ಎಂ.ಬಿ.ಪಾಟೀಲ್ ಜೊತೆಗೂಡಿ ಚರ್ಚೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೋಡಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರನ್ನು ಸ್ವಾಗತಿಸಿ ಕರೆದೊಯ್ದುರೆ, ಬಳಿಕ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಮಹಾರಾಷ್ಟ್ರ ಮಾಜಿ ಸಿಎಂ ಉದ್ದವ್ ಠಾಕ್ರೆ, ಶಿವಸೇನಾ ನಾಯಕರಾದ ಆದಿತ್ಯ ಠಾಕ್ರೆ, ಸಂಜಯ್ ರಾವತ್ ಅವರನ್ನು ಸ್ವಾಗತಿಸಿ ಸಭೆ ನಿಗದಿಯಾಗಿರುವ ಖಾಸಗಿ ಹೋಟೆಲ್ ಕಡೆಗೆ ಬೀಳ್ಕೋಟ್ಟರು.
ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್, ಬಳಿಕ ಆಗಮಿಸಿದ ಜೆಡಿಯು ನಾಯಕ ಹಾಗೂ ಬಿಹಾರದ ಸಿಎಂ ನಿತೀಶ್ ಕುಮಾರ್, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಅವರನ್ನು ಸ್ವಾಗತಿಸಿ, ಹೋಟೆಲ್ ಕಡೆಗೆ ಬೀಳ್ಕೋಟ್ಟರು. ತಂಡೋಪ ತಂಡವಾಗಿ ಆಗಮಿಸಿದ ನಾಯಕರಿಗೆ ಮೈಸೂರು ಪೇಟ ಧರಿಸಿ, ಶಾಲುಹೊದಿಸಿ, ಹೂಗೂಚ್ಛ ನೀಡಿ ಸ್ವಾಗತಿಸಿದರು. ಸಚಿವರೊಂದಿಗೆ ಮತ್ತೋರ್ವ ಸಚಿವ ಎಂ.ಬಿ.ಪಾಟೀಲ್ ಸಾಥ್ ನೀಡಿದರು.