ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಹೆಚ್ಚಿನ ಜನರಿಗೆ ತಲುಪಬೇಕು ಎನ್ನುವ ಸದುದ್ದೇಶದಿಂದ ಕೆಲವು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ಹಾಗಾಗಿ ಅರ್ಜಿ ಸಲ್ಲಿಕೆ ಸ್ವಲ್ಪ ವಿಳಂಬವಾಗತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೃಹಲಕ್ಷ್ಮೀ ಯೋಜನೆ ಬಹಳಷ್ಟು ಜನರಿಗೆ ತಲುಪಬೇಕು ಹಾಗೂ ಸರಳವಾಗಿ ಸಿಗಬೇಕು ಎಂಬ ಕಾರಣಕ್ಕೆ ಯೋಜನೆಯಲ್ಲಿ ಹಲವು ಬದಲಾವಣೆಯನ್ನು ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ಕೆಲ ಬದಲಾವಣೆ ಮಾಡಲು ಸೂಚಿಸಿದ್ದೇವೆ. ಇದರಿಂದಾಗಿ ಸ್ವಲ್ಪ ಸಮಯ ಬೇಕಾಗಿದೆಯೇ ವಿನಃ ಬೇರೇನೂ ಸಮಸ್ಯೆ ಇಲ್ಲ ಎಂದು ಹೇಳಿದರು.
ಪ್ರತ್ಯೇಕ ಆ್ಯಪ್ ಕೂಡ ಸಿದ್ಧಪಡಿಸಲು ಸೂಚಿಸಲಾಗಿದೆ. ಅದಾದಲ್ಲಿ ವೇಗವಾಗಿ ಅರ್ಜಿ ಸ್ವೀಕಾರ ಸಾಧ್ಯವಾಗುತ್ತದೆ. ಸಾಧ್ಯವಾದಷ್ಟು ಹೆಚ್ಚಿನ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವುದು ಸರಕಾರದ ಉದ್ದೇಶವಾಗಿದೆ. ಈ ಎಲ್ಲಾ ಕಾರಣದಿಂದಾಗಿ ಯೋಜನೆಗೆ ಅರ್ಜಿ ಸಲ್ಲಿಕೆ ಕೊಂಚ ವಿಳಂಬವಾಗುತ್ತಿದೆ. ಆಗಸ್ಟ್ 17 ಅಥವಾ 18ರಿಂದ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುತ್ತದೆ ಎಂದು ತಿಳಿಸಿದರು.