ಬೆಳಗಾವಿ: ‘‘ಪ್ರಸಕ್ತ ವರ್ಷದ ಮಳೆ ಹಾನಿಗೆ ಪರಿಹಾರವಾಗಿ ರೈತರಿಗೆ 297 ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ,’’ ಎಂದು ಕಂದಾಯ ಸಚಿವ ಕೃ ಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದರು.
ಈ ಬಗ್ಗೆ ಸದನಕ್ಕೆ ಶುಕ್ರವಾರ ಮಾಹಿತಿ ನೀಡಿದ ಅವರು,‘‘ಭೂಕುಸಿತ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಎರಡೂವರೆ ವರ್ಷಗಳಲ್ಲಿ 425 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ಆದರೆ, ಕೇಂದ್ರ ಸರಕಾರದಿಂದ ಈ ವರ್ಷದ ಎನ್‌ಡಿಆರ್‌ಎಫ್ ಪರಿಹಾರ ಈವರೆಗೂ ಸಂದಾಯವಾಗಿಲ್ಲ,’’ ಎಂದರು.
‘‘ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಬೆಳೆ ಹಾನಿ ಉದ್ದೇಶಕ್ಕೆ ಒಟ್ಟು 297 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಶೇ.75 ರಷ್ಟು ಮಂದಿಗೆ ಪರಿಹಾರ ತಲುಪಿದೆ. ಬಾಕಿ ಉಳಿದವರಿಗೆ 3-4 ದಿನಗಳಲ್ಲಿ ಜಮೆಯಾಗಲಿದೆ,’’ ಎಂದರು.
‘‘ರಸ್ತೆ, ಸೇತುವೆ, ಶಾಲಾ ಕೊಠಡಿ, ಅಂಗನವಾಡಿ, ಆರೋಗ್ಯ ಕೇಂದ್ರ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಪುನರ್‌ಸ್ಥಾಪನೆಯ ತುರ್ತು ಪರಿಹಾರಕ್ಕಾಗಿ 80.47 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಪೈಕಿ 60.16 ಕೋಟಿ ರೂ. ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗಳ ಖಾತೆಯಲ್ಲಿತುರ್ತು ಪರಿಹಾರಕ್ಕಾಗಿ 579 ಕೋಟಿ ರೂ. ಲಭ್ಯವಿದೆ. ಪ್ರವಾಹದಿಂದ ಮನೆಗೆ ನೀರು ನುಗ್ಗಿರುವ ಕಡೆ ನಿತ್ಯದ ಖರ್ಚು ನಿಭಾಯಿಸಲು 5,000 ರೂ. ವಿತರಿಸಲಾಗಿದ್ದು, 5.62 ಕೋಟಿ ರೂ. ಬಿಡುಗಡೆಯಾಗಿದೆ,’’ ಎಂದು ಮಾಹಿತಿ ನೀಡಿದರು.
ಬೆಳೆ ನಷ್ಟ ಮಾಹಿತಿ
ಮಳೆ ಬೆಳೆಹಾನಿ(ಹೆಕ್ಟೇರ್) ಪರಿಹಾರ
ಮುಂಗಾರು 1,59,718 94.94ಕೋಟಿ ರೂ.
ಜೀವ ಹಾನಿ
133 ಮಂದಿ ಸಿಡಿಲು ಬಡಿತ, ಇತರೆ ಪ್ರಕೃತಿ ವಿಕೋಪಕ್ಕೆ 133 ಮಂದಿ ಮೃತಪಟ್ಟಿದ್ದು, 5 ಲಕ್ಷ ರೂ. ಮೃತರ ಕುಟುಂಬಗಳಿಗೆ ಪರಿಹಾರ ನೀಡಿಕೆ
ಜಾನುವಾರು
714 ಸಣ್ಣ, ದೊಡ್ಡ ಜಾನುವಾರುಗಳ ಸಾವಿಗೆ 1.20 ಕೋಟಿ ರೂ. ಪರಿಹಾರ
ಮನೆಗಳು
20,893 ಮನೆಗಳಿಗೆ ಭಾಗಶಃ, 3,200 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಪರಿಹಾರಕ್ಕಾಗಿ 82.20 ಕೋಟಿ ರೂ. ಪಾವತಿ
ಕಾಳಜಿ ಕೇಂದ್ರ
290 ಕಾಳಜಿ ಕೇಂದ್ರಗಳಲ್ಲಿ 25,914 ಸಂತ್ರಸ್ತರಿಗೆ ವ್ಯವಸ್ಥೆ ಮಾಡಲಾಗಿತ್ತು
ಭೂಕುಸಿತ ತಡೆಗೆ ಶಾಶ್ವತ ಪರಿಹಾರ ಕ್ರಮ
‘‘ರಾಜ್ಯದ ಆರು ಜಿಲ್ಲೆಗಳ 863 ಗ್ರಾಪಂಗಳನ್ನು ಭೂಕುಸಿತ ಸಂಭವಿಸುವ ಪ್ರದೇಶಗಳು ಎಂದು ಗುರುತಿಸಲಾಗಿದೆ,’’ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದರು.