ಬೆಳಗಾವಿ: ಮುಖ್ಯಮಂತ್ರಿ ಸ್ಥಾನಕ್ಕಾಗಿ ಯಾರ್ಯಾರು ಪ್ರಯತ್ನಿಸುತ್ತಿದ್ದಾರೋ ಅದು ಅವರ ವೈಯಕ್ತಿಕ ವಿಚಾರ ಬಿಟ್ಟರೆ. ಪಕ್ಷದ ಹಂತದಲ್ಲಿ ಯಾವುದೇ ರೀತಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ. ಹೈಕಮಾಂಡ್‌ನಿಂದ ಹಿಡಿದು ಎಲ್ಲರೂ ಸಿದ್ದರಾಮಯ್ಯ (CM Siddaramaiah) ಅವರ ಬೆನ್ನಿಗೆ ನಿಂತಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅಭಿಪ್ರಾಯ ಪಟ್ಟರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೈ ನಾಯಕರು ಭೇಟಿ ಆಗುತ್ತಿರುವ ವಿಚಾರಕ್ಕೆ ಕಿತ್ತೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅವರವರ ಪ್ರಯತ್ನ, ಆಸೆ. ಅದು ಅವರಿಗೆ ಬಿಟ್ಟಿದ್ದು. ಅದು ತಪ್ಪು ಏನೂ ಅಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ ಅವರು ಪಕ್ಷದ ಉನ್ನತ ಮಟ್ಟದಲ್ಲಿದ್ದಾರೆ. ಇವರೆಲ್ಲಾ ನಾವು ಸಿಎಂ ಬೆನ್ನಿಗೆ ನಿಂತಿದ್ದೇವೆ ಎಂದು ನಮಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ಸಿಎಂ ಬದಲಾವಣೆ ಎನ್ನುವುದು ಕೇವಲ ಊಹೆ ಮತ್ತು ಕಲ್ಪನೆ. ಕಾಂಗ್ರೆಸ್ ಹೈಕಮಾಂಡ್ ಸಿಎಂ ಜೊತೆಗಿದೆ. ಇದರಲ್ಲಿ ವ್ಯಯಕ್ತಿಕವಾಗಿ ನನಗೆ ನೂರಕ್ಕೆ ನೂರು ಭರವಸೆ ಇದೆ ಎಂದರು.
ಒಳ್ಳೆಯ ಕೆಲಸಗಾರ ಎಂದು ಗುರುತಿಸಿಕೊಂಡಿರುವ ತಮ್ಮ ಹೆಸರು ಸಿಎಂ ರೇಸ್‌ನಲ್ಲಿ ಬರಬಹುದಾ ಎಂಬ ಪ್ರಶ್ನೆಗೆ ಜನ ನನ್ನ ಆರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ (Congress) ಪಕ್ಷ ಮೂರು ಬಾರಿ ಮಂತ್ರಿ ಮಾಡಿದೆ. ನನ್ನ ತಂದೆ ತಾಯಿ ಪುಣ್ಯ ನನಗೆ ಸಿಕ್ಕಿದೆ. ಇದಕ್ಕಿಂತ ಇನ್ನೇನು ನನಗೆ ಬೇಕು. ಐದು ವರ್ಷ ಕೃಷಿ ಮಂತ್ರಿಯಾಗಿದ್ದೆ.ಪಂಚಾಯತರಾಜ್ ಇಲಾಖೆ ನಿರ್ವಹಿಸಿದ್ದೇನೆ. ಈಗ ಕಂದಾಯ ಸಚಿವನಾಗಿದ್ದೇನೆ. ಕೈ ತುಂಬಾ ಕೆಲಸ ಇದೆ. ದಿನದ 24 ಗಂಟೆ ಅಲ್ಲ, 48 ಗಂಟೆ ಇದ್ದರೂ ಸಾಕಾಗುವುದಿಲ್ಲ. ಇರುವುದರಲ್ಲಿ ಜನರಿಗೆ ಒಳ್ಳೆಯ ಕೆಲಸ ಮಾಡಿದರೆ ಅದೇ ನನಗೆ ಸೌಭಾಗ್ಯ. ಎಐಸಿಸಿ ಅಧ್ಯಕ್ಷರು, ಸಿಎಂ ಸೇರಿ ಎಲ್ಲರಿಂದ ಒಳ್ಳೆಯ ಗೌರವ ಸಿಕ್ಕಿದೆ. ಏನೆಲ್ಲಾ ಸಿಗಬೇಕೋ ಅದೆಲ್ಲವೂ ಸಿಕ್ಕಿದೆ. ಹಾಗಾಗಿ, ಏನೋ ಗೊಂದಲ ಎನ್ನುತ್ತಿದ್ದಿರಿ. ಆದರೆ, ನಾನು ಎಲ್ಲಾ ಕಡೆ ಓಡಾಡಿ ಕೆಲಸ ಮಾಡುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು.
ಹರಿಯಾಣ (Haryana) ಮತ್ತು ಜಮ್ಮುವಿನಲ್ಲಿ (Jammu) ಕಾಂಗ್ರೆಸ್ ನೇತೃತ್ವದ ಘಟಬಂಧನ್‌ಗೆ ಬಹುಮತ ಸಿಕ್ಕಿರೋದು ಸಂತೋಷದ ವಿಷಯ. ರಾಹುಲ್ ಗಾಂಧಿ (Rahul Gandhi) ಹಾಗೂ ಖರ್ಗೆಯವರಿಗೆ ಅಭಿನಂದನೆಗಳು. ಅವರ ನೇತೃತ್ವದಲ್ಲಿ ಹೋರಾಟ ನಡೆದು ಬಂದಿದೆ. ದೇಶದಲ್ಲಿ ಕೆಲವೇ ಕೆಲವು ಶ್ರೀಮಂತರಿಗೆ ಅನುಕೂಲ ಆದರೆ ಸಾಲದು. ಜನಸಾಮಾನ್ಯರಿಗೆ ಅನುಕೂಲ ಆಗಬೇಕು. ದೇಶದಲ್ಲಿ ಉದ್ಯೋಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಇದರ ವಿರುದ್ಧ ರಾಹುಲ್ ಗಾಂಧಿ ಹೋರಾಟ ನಡೆಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಮಿತ್ರ ಪಕ್ಷಗಳಿಗೆ ನೀಡಿವೆ. ಅದಕ್ಕಿಂತಲೂ ಹೆಚ್ಚಿನ ಬೆಂಬಲ ಈ ಚುನಾಚಣೆಯಲ್ಲಿ ದೊರೆತಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸ್ತಿರೋದು ಬಲ ಆಗ್ತಿರೋದಕ್ಕೆ ಇದು ಸಾಕ್ಷಿ ಎಂದರು.