ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ 1,30,000 ಕ್ಯುಸೆಕ್ ನೀರನ್ನು ಹರಿ ಬಿಟ್ಟಿದ್ದರಿಂದ ಕಾವೇರಿ ನದಿ ರೌದ್ರ ನರ್ತನದೊಂದಿಗೆ ಹರಿಯುತ್ತಿದೆ. ಈ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಿಮಿಷಾಂಭ ದೇವಸ್ಥಾನದ ಮುಂಭಾಗ ಸಂಪೂರ್ಣ ಜಲಾವೃತಗೊಂಡಿದೆ.
ಶುಕ್ರವಾರ ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟ ಮುಳುಗಡೆಯಾಗಿತ್ತು. ಇಂದು ದೇವಸ್ಥಾನದ ಮುಂಭಾಗ, ಪಾರ್ಕಿಂಗ್ ಸ್ಥಳ, ನವಗ್ರಹ, ಅರಳಿಕಟ್ಟೆ, ಶಿವನ ದೇಗುಲಗಳು ಮುಳುಗಡೆಯಾಗಿವೆ. ಭಕ್ತರಿಗೆ ನದಿಗೆ ಇಳಿಯದಂತೆ ಸೂಚಿಸಲಾಗಿದೆ.
ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ಸಂಪೂರ್ಣ ಮುಳುಗಡೆಯಾಗಿದೆ. ಪಿಂಡಪ್ರಧಾನ, ಹೋಮ ಹವನ ಇತರೆ ಪೂಜಾ ಕೈಂಕರ್ಯಗಳಿಗೆ ಗೋಸಾಯ್ ಘಾಟ್ ಪ್ರಸಿದ್ಧಿ ಪಡೆದುಕೊಂಡಿದೆ. ಅಲ್ಲದೇ ಸಿನಿಮಾ ಚಿತ್ರೀಕರಣಗಳು ಇಲ್ಲಿ ನಡೆಯುತ್ತಿದ್ದವು. ಇದೀಗ ಕಾವೇರಿ ಭೋರ್ಗರೆತಕ್ಕೆ ಗೋಸಾಯ್ ಘಾಟ್ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿನ ಕಾಶಿ ವಿಶ್ವನಾಥ, ಶ್ರೀಕೃಷ್ಣ, ಶಿವ, ಆಂಜನೇಯ, ಗಣಪತಿ ದೇವಸ್ಥಾನಗಳು ಸಂಪೂರ್ಣ ಜಲಾವೃತಗೊಂಡಿವೆ.