ಚಿಕ್ಕೋಡಿ: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಕರಾಳ ದಿನ ಆಚರಿಸಲಾಗುತ್ತಿದೆ.
ಬೆಳಗಾವಿ ಜಿಲ್ಲಾಡಳಿತ ನಿಷೇಧದ ಮಧ್ಯೆಯೂ ಕರಾಳ ದಿನಾಚರಣೆಗೆ ಎಂಇಎಸ್ ತಯಾರಿ ನಡೆಸಿದ್ದು, ಶಿವಸೇನೆ ಉದ್ಧವ್ ಠಾಕ್ರೆ ಬಣದಿಂದ ಬೆಳಗಾವಿ ಚಲೋಗೆ ಕರೆ ನೀಡಲಾಗಿದೆ.
ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ, ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಳಗಾವಿ ಚಲೋಗೆ ಕರೆ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಕೊಲ್ಹಾಪುರ ಜಿಲ್ಲೆ ಕಾಗಲ್ ಬಳಿ ಜಮಾವಣೆಯಾಗಲು ಕರೆ ನೀಡಿದ್ದು, ಈಗಾಗಲೇ ಚಲೋ ಯಾತ್ರೆ ಆರಂಭಿಸಿದ್ದಾರೆ.
ಭಗವಾ ಧ್ವಜದೊಂದಿಗೆ ಮಹಾರಾಷ್ಟ್ರದ ಕಾಗಲ್ ಲಕ್ಷ್ಮಿಟೇಕ್ ಬಳಿ ಆಗಮಿಸುವಂತೆ ಶಿವಸೇನೆ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಕಾಗಲ್‌ನಿಂದ ಕೊಗನೊಳ್ಳಿ ಟೋಲ್‌ಗೇಟ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸಲು ಶಿವಸೇನೆ ನಿರ್ಧರಿಸಿದ್ದು, ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕೊಗನೊಳ್ಳಿ ಟೋಲ್‌ಗೇಟ್ ಬಳಿಯೇ ಅವರನ್ನ ತಡೆಯಲು ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.