Ad imageAd image

ಮುನಿರತ್ನ ಬಂಧನದ ಹಿಂದೆ ದ್ವೇಷಕಾರಣವಿಲ್ಲ;ಮಾಡಿದ್ದುಣ್ಣೋ ಮಾರಾಯ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಲೇವಡಿ

ratnakar
ಮುನಿರತ್ನ ಬಂಧನದ ಹಿಂದೆ ದ್ವೇಷಕಾರಣವಿಲ್ಲ;ಮಾಡಿದ್ದುಣ್ಣೋ ಮಾರಾಯ- ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಲೇವಡಿ
WhatsApp Group Join Now
Telegram Group Join Now

ಬೆಳಗಾವಿ:ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ಅವರ ಬಂಧನದ ಹಿಂದೆ ಯಾವುದೇ ದ್ವೇಷ ರಾಜಕಾರಣವಿಲ್ಲ; ಅವರಿಗೀಗ ಮಾಡಿದ್ದುಣ್ಣೋ ಮಾರಾಯ ಎಂಬಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಲೇವಡಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಶಾಸಕ ಮನಿರತ್ನ ಅವರ ವಿಚಾರದಲ್ಲಿ ಯಾರು ದ್ವೇಷ ರಾಜಕಾರಣ ಮಾಡುತ್ತಾರೆ? ಅವರು ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಾಯಕರೇನು ಮುನಿರತ್ನ ಅವರಿಗೆ ಕೆಟ್ಟ ಮಾತುಗಳಿಂದ ಬೈಯಿರಿ, ಅಥವಾ ಬ್ಲಾಕ್ ಮೇಲ್ ಮಾಡಿ ಎಂದು ಹೇಳಿದ್ದಾರಾ? ಮಾಡಿದ್ದುಣ್ಣೋ ಮಾರಾಯ ಎನ್ನುವಂತಾಗಿದೆ ಅವರ ಸ್ಥಿತಿ ಎಂದು ಕಿಡಿಕಾರಿದರು.

ಮಾತಿಗೆ ಕನ್ನಡಿ ಹಿಡಿಯುವ ಅವಶ್ಯತೆ ಇಲ್ಲ
ಕೆಲ ರಾಜಕಾರಣಗಳು ಮೊದಲು ಕೆಟ್ಟದಾಗಿ ಮಾತನಾಡುತ್ತಾರೆ; ಆಮೇಲೆ ತಿರುಚಿದ್ದಾರೆ, ದ್ವೇಷದ ರಾಜಕಾರಣ ಎಂದೆಲ್ಲ ಹೇಳುತ್ತಾರೆಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೆಲವೊಬ್ಬರು ಮಾತನಾಡುತ್ತಾರೆ ನಿಜ; ಆದರೆ, ಅದನ್ನು ಪ್ರಮಾಣಿಕರಿಸಿ ನೋಡಬೇಕು. ಆದರೆ, ಮುನಿರತ್ನ ವಿಚಾರದಲ್ಲಿ ಏನಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿದರು.

ಮುನಿರತ್ನ ಅವರು ಮಹಿಳೆಯರ ಬಗ್ಗೆ ಆಡಿರುವ ಕೀಳು ಮಾತುಗಳನ್ನು ಯಾರೂ ಕೂಡ ಸಹಿಸಲು ಸಾಧ್ಯವಿಲ್ಲ. ಜಾತಿ, ಜಾತಿಗಳ ಮಧ್ಯೆ ಸಂಘರ್ಷ ತರುವಂತಹ ಮಾತುಗಳನ್ನು ಯಾರೂ ಕೂಡ ಆಡಬಾರದೆಂದು ಸಚಿವರು ಇದೇ ವೇಳೆ ಕಿವಿಮಾತು ಹೇಳಿದರು.

ಮಾನವ ಸರಪಳಿಯಲ್ಲಿ 1.50 ಲಕ್ಷ ಇಲಾಖಾ ನೌಕರರು ಭಾಗಿ
ರಾಜ್ಯ ಸರ್ಕಾರ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಬೀದರ್ ನಿಂದ ಚಾಮರಾಜನಗರದವರೆಗೆ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಮಾನವೀಯ ಮೌಲ್ಯಗಳ ಸಾಕಾರಗೊಳಿಸುವ ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ನೌಕರವರ್ಗ ಭಾಗವಹಿಸಿದ್ದು ಹೆಮ್ಮೆ ಎನಿಸಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

WhatsApp Group Join Now
Telegram Group Join Now
Share This Article