ಬೆಳಗಾವಿ: ಮಹಾರಾಷ್ಟ್ರದ ಸಚಿವರಿಗೆ, ಸಂಸದರಿಗೆ ಬೆಳಗಾವಿ ಗಡಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಓರ್ವ ಸಂಸದರ ಪ್ರವಾಸ ಪಟ್ಟಿ ಬಂದಿದೆ. ಈ ಮುಂಚೆ ಡಿಸೆಂಬರ್ 3ಕ್ಕೆ ಬರುವುದಾಗಿ ಹೇಳಿದ್ದರು. ಇದೀಗ ಡಿಸೆಂಬರ್ 6ಕ್ಕೆ ಬರುವುದಾಗಿ ಹೇಳಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಅವರಾಗೇ ಪ್ರವಾಸ ರದ್ದು ಪಡಿಸುವ ನಿರೀಕ್ಷೆ ಇದೆ. ಇಲ್ಲವಾದರೆ ನಾವೇ ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೇಳಿದರು.
ಸಚಿವರು ಮತ್ತು ಸಂಸದರ ಭೇಟಿ ಸಂಬಂಧ ಈ ಹಿಂದೆ ಹೇಗೆ ಆದೇಶ ಹೊರಡಿಸಿ ತಡೆಯಲಾಗಿತ್ತೋ ಅದೇ ರೀತಿ ಬೆಳಗಾವಿ ನಿಷೇಧ ಆದೇಶ ಹೊರಡಿಸಲಾಗುವುದು.
ಐಪಿಸಿ ಸೆಕ್ಷನ್ 143 ಪ್ರಕಾರ ಪ್ರತಿಬಂಧಕ ಕಾಯ್ದೆ ಹೊರಡಿಸುತ್ತೇವೆ. ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕರ್ನಾಟಕದ ಸಿಎಸ್ ಸಂದೇಶ ಕಳುಹಿಸಿದ್ದಾರೆ. ಬೆಳಗಾವಿಯ ಎಲ್ಲ ಗಡಿಭಾಗದಲ್ಲಿಯೂ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.