spot_img
spot_img
spot_img
32.1 C
Belagavi
Tuesday, June 6, 2023
spot_img

ಸಂವಿಧಾನಿಕ ಮೌಲ್ಯಗಳ ಬಿತ್ತುವ ಕಾರ್ಯಕ್ಕೆ ಸಹಕಾರ ಇರಲಿ: ಸಭಾಪತಿ ಹೊರಟ್ಟಿ

ಬೆಳಗಾವಿ :ವಿಧಾನ ಪರಿಷತ್ ಸಭಾಪತಿಯಾಗಿ ಸಂವಿಧಾನಿಕ ಮೌಲ್ಯಗಳನ್ನು ಬಿತ್ತುವ ಕಾರ್ಯಕ್ಕೆ ಎಲ್ಲರ ಸಹಕಾರ ಇರಲಿ ಎಂದು ವಿಧಾನ ಪರಿಷತ್ ನ ನೂತನ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಹೇಳಿದರು.

ಬುಧವಾರ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಆದ ನಂತರ ಅವರು ಮಾತನಾಡಿದರು.

ಸಭಾಪತಿಯಾಗಿ ಪಕ್ಷಕಾತೀತವಾಗಿ, ಜಾತ್ಯಾತೀತವಾಗಿ ಸಂವಿಧಾನದ ಆಶಯಕ್ಕೆ ಬದ್ಧನಾಗಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ಪಾರದರ್ಶಕ ಹಾಗೂ ಮುಕ್ತ ಮನಸ್ಸಿನಿಂದ, ಶುದ್ಧ ಅಂತಃಕರಣದಿಂದ ಕೆಲಸ ಮಾಡುತ್ತೇನೆ. ಕಳೆದ 4 ದಶಕಗಳಿಂದ ನಂಬಿಕೊಂಡು ಬಂದ ಶಿಕ್ಷಕರಿಗೆ ಅಭಿನಂದನೆಗಳು.

ಶಿಕ್ಷಕರೊಬ್ಬರು 3ನೇ ಬಾರಿ ಸಭಾಪತಿಯಾಗಿದ್ದು ಇತಿಹಾಸ. ಇದಕ್ಕೆ ಕಾರಣೀಕರ್ತರು ಶಿಕ್ಷಕರು. ಅವರ ಪ್ರೀತಿಗೆ ನಾನು ಸದಾ ಚಿರಋಣ . ಈ ಎಲ್ಲ ಗೌರವ ಆದರಗಳು ಅವರಿಗೆ ಸಲ್ಲುತ್ತವೆ. ಶಿಕ್ಷಕರೊಬ್ಬರು ಮೂರು ಬಾರಿ ಸಭಾಪತಿಯಾಗಿ ಆಯ್ಕೆಯಾಗಿದ್ದು ದೇಶದಲ್ಲಿಯೇ ಮೊದಲು.

ಎಂಟು ಬಾರಿ ಸತತ ವಿಧಾನ ಪರಿಷತ್ತಿಗೆ ಆಯ್ಕೆಯಾಗುವುದು ಸಹ ಇದು ಕೂಡಾ ಮೊದಲು; ಈ ಎಲ್ಲ ಗೌರವ ನನ್ನ ಬೆಂಬಲಿಸಿದ ಶಿಕ್ಷಕ ಸಮೂಹಕ್ಕೆ ಸಲ್ಲುತ್ತದೆ. ಹಿಂದಿನ ಹಾಗೂ ಇಂದಿನ ರಾಜಕೀಯ ವ್ಯವಸ್ಥೆ ಅಜಗಜಾಂತರದಿಂದ ಕೂಡಿದೆ. ರಾಜಕೀಯ ಮೌಲ್ಯಗಳು ಕುಸಿಯುತ್ತಿವೆ.

ರಾಜಕಾರಣ ಗಳನ್ನು ಜನರು ನಂಬದೇ ಇರುವಂತಹ ವಾತಾವರಣ ಸೃಷ್ಟಿಯಾಗಿದೆ. ಆ ಶುದ್ದೀಕರಣದತ್ತ ಎಲ್ಲರೂ ಕೈಜೋಡಿಸುವ ಅವಶ್ಯಕತೆ ಇದೆ.ರಾಜಕಾರಣ ಒಂದು ವೃತ್ತಿಯಾಗದ ಸೇವೆಯಾಗಬೇಕೆಂಬುದೇ ನನ್ನ ಬಯಕೆ. ಇಂದು ಮೌಲ್ಯಾಧಾರಿತ ರಾಜಕಾರಣ ಎಂದರೆ ಏನು ಎನ್ನುವ ಪ್ರಶ್ನೆ ಎದುರಾಗಿದೆ.ಎರಡು ಬಾರಿ ಸಭಾಪತಿಯಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ತಾವು ನೀಡಿದ ಸಹಕಾರವನ್ನು ನಾನು ಎಂದೂ ಮರೆಯಲಾರೆ.

ಸದನದಲ್ಲಿ ತಮೆಲ್ಲರ ಸಹಕಾರದಿಂದ 3ನೇ ಬಾರಿ ಸಭಾಪತಿಯಾಗುವ ಅವಕಾಶ ನನಗೆ ನೀಡಿದ್ದೀರಿ. ಹಲವಾರು ಬದಲಾವಣೆಗಳನ್ನು ಚಿಂತನೆಗಳನ್ನು ಅಳವಡಿಸಿಕೊಂಡು ಹೊಸ ದಿಕ್ಕಿನತ್ತ ಒಯ್ಯುವ ಪ್ರಯತ್ನ ಮಾಡೋಣ ಎಂದರು.

115 ವರ್ಷಗಳ ಸುದೀರ್ಘ ಇತಿಹಾಸ ಇರುವ ಕರ್ನಾಟಕ ರಾಜ್ಯದ ವಿಧಾನಪರಿಷತ್ತಿನ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ಹಿತೈಷಿಗಳ ಸಹಕಾರ ಮತ್ತು ವಿಶೇಷವಾಗಿ ಶಿಕ್ಷಕ ಬಂಧುಗಳ ಆಶೀರ್ವಾದದಿಂದಾಗಿ ಒದಗಿ ಬಂದಿರುವದು ನನ್ನ ಪುಣ್ಯ ಎಂದರು.

ಹಿರಿಯರ ಮನೆಯ ಗಾಂಭಿರ್ಯತೆ, ಘನತೆ ಹಾಗೂ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸದನದಲ್ಲಿನ ಚರ್ಚೆಗಳು ಅರ್ಥಪೂರ್ಣವಾಗಿರಬೇಕು ಹಾಗೂ ಸಮಾಜಮುಖಿಯಾಗಿರಬೇಕು ಎಂಬ ಧೈಯೋದ್ದೇಶದೊಂದಿಗೆ ಅತ್ಯಂತ ಉತ್ಸಾಹದಿಂದ ದೇಶದ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಯ ಮಾದರಿಯಲ್ಲಿ ಸದನವನ್ನು ಕಿಯಾಶೀಲವಾಗಿ ಮತ್ತು ಸಂಸದೀಯ ಮೌಲ್ಯಗಳ ಆಧಾರದ ಮೇಲೆ ಶಾಸನಸಭೆಯ ನಿಯಮಾವಳಿ ಅಡಿಯಲ್ಲಿ ಮುನ್ನಡೆಸುವ ಆಶಯಕ್ಕೆ ಬದ್ದನಾಗಿದ್ದೇನೆ ಎಂದರು.

ಚಿಂತಕರ ಚಾವಡಿ, ಪ್ರಾಜ್ಞರ ಮನೆ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ವಿಧಾನಪರಿಷತ್ತು ಹೊಂದಿದೆ.ರಾಜ್ಯವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣ ಕವಾಗಿ ಕಟ್ಟುವ ನಿಟ್ಟಿನಲ್ಲಿ ಕಾಲ-ಕಾಲಕ್ಕೆ ಸರಕಾರಕ್ಕೆ ಬೇಕಾದಂತಹ ಅಗತ್ಯವಾದ ಸಲಹೆಗಳನ್ನು ಹಾಗೂ ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ. ಸದನದ ಅನೇಕ ಹಿರಿಯ ಹಾಗೂ ಪ್ರಬುದ್ಧ ಸದಸ್ಯರುಗಳ ಅನುಭವ ಹಾಗೂ ವಿದ್ವತ್ ಪೂರ್ಣ ಚಿಂತನೆಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿವೆ.

ಸಭಾಪತಿಯಾಗಿ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ಸೇರಿದಂತೆ ಸವಾರ್ಂಗೀಣ ಅಭಿವೃದ್ಧಿಗೆ ಕೈಜೋಡಿಸುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನಾಡಿನ ಏಳಿಗೆಗೆ ಶ್ರಮಿಸುತ್ತೇನೆ.

 

ಸಭಾಪತಿ ಸ್ಥಾನಕ್ಕೆ ಆಯ್ಕೆಯಾಗಲು ಕಾರಣ ಕರ್ತರಾದ ವಿಧಾನ ಪರಿಷತ್ ಸದಸ್ಯರು, ಮುಖ್ಯಮಂತ್ರಿಗಳು, ಸಚಿವರು, ಸಭಾನಾಯಕರು, ವಿರೋಧ ಪಕ್ಷದ ನಾಯಕರು, ಆಡಳಿತ ಮತ್ತು ವಿರೋಧ ಪಕ್ಷದ ಮಾನ್ಯ ಸಚೇತಕರಿಗೆ ಅಧಿಕಾರಿಗಳಿಗೆ ವಂದನೆಗಳು ಎಂದರು.

ಇದೇ ಸಂದರ್ಭದಲ್ಲಿ ರಾಜಕೀಯ ಜೀವನದಲ್ಲಿ ಮಾರ್ಗದರ್ಶನ ಮಾಡುತ್ತ ಬಂದ ರಾಜಕೀಯ ಗುರು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ದಿ.ಜೆ.ಹೆಚ್.ಪಟೇಲ್, ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆ.ಪಿ.ಸಿ.ಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ದಿ.ನಜೀರಸಾಬ್, ಡಿ.ಬಿ.ಚಂದ್ರೇಗೌಡರವರು, ದಿ.ಬಸವರಾಜೇಶ್ವರಿ, ಎಂ.ಸಿ.ನಾಣಯ್ಯ, ದಿ.ಆರ್. ಗುಂಡೂರಾವ್, ದಿ.ಬಿ.ರಾಚಯ್ಯರವರು, ಜೆ.ಡಿ.ಎಸ್.ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಪರಿಷತ್ ಜೆ.ಡಿ.ಎಸ್ ನಾಯಕ ಎಸ್.ಎಲ್.ಭೋಜೇಗೌಡರ ಸಹಕಾರವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಸ್ಮರಿಸಿದರು.

Related News

ಅಂತೆ ಕಂತೆಗಳಿಗೆ ಕಿವಿಗೊಡಬೇಡಿ, ಸರಕಾರ ನಿಮ್ಮ ಜೊತೆಗಿದೆ – ಜನರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಯ

ಬೆಳಗಾವಿ: ಭರವಸೆ ನೀಡಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ಯಾವುದೇ ಅಂತೆ ಕಂತೆಗಳಿಗೆ ಕಿವಿಗೊಡಬೇಡಿ. ಸರಕಾರ ನಿಮ್ಮ ಜೊತೆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಹಿರಿಯ ನಾಗರಿಕರು ಮತ್ತು...

ಪ್ರಿಯತಮೆಯನ್ನು ಕೊಲೆ ಮಾಡಿ ಎಸ್ಕೇಪ್ ಆದ ಪ್ರಿಯಕರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿ ಬಳಿಕ ಎಸ್ಕೇಪ್ ಆದ ಘಟನೆ ನಡೆದಿದೆ. ಬೆಂಗಳೂರಿನ ಜೀವನ್ ಭಿಮಾ ನಗರದ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಆಕಾಂಕ್ಷಾ ಮೃತ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -