ಬೆಳಗಾವಿ: ಪತ್ರಕರ್ತರು ರಾಜಕಾರಣಕ್ಕಿಂತ ಅಭಿವೃದ್ಧಿ ಕೆಲಸಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂಘಟಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪತ್ರಿಕಾ ವಿತರಕರಿಗೆ ಸೈಕಲ್ ವಿತರಿಸಿ ಅವರು ಅವರು ಮಾತನಾಡುತ್ತಿದ್ದರು. ಇಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳ ಕುರಿತು ವಿಮರ್ಶೆ ಮಾಡಬೇಕಾದ ಸ್ಥಿತಿ ಬಂದಿದೆ. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡು ಎನ್ನುವಂತೆ ಪತ್ರಕರ್ತರು ಕೆಲಸ ಮಾಡಬೇಕಿದೆ.
ಪದೇ ಪದೆ ನನ್ನ ಮತ್ತು ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವಂತೆ ಸುದ್ದಿ ಬರುತ್ತಿದೆ. ಇದಕ್ಕೆಲ್ಲ ಕೆಲವೊಮ್ಮೆ ಉತ್ತರಿಸಲೂ ಮುಜುಗರವಾಗುತ್ತದೆ. ಇಲ್ಲಿ ನಾವಿಬ್ಬರೂ ಇದ್ದೇವೆ. ನಮ್ಮ ಮಧ್ಯೆ ಯಾವ ಗೊಂದಲವೂ ಇಲ್ಲ. ಆದರೆ ಸುಳ್ಳನ್ನೇ ಪದೇ ಪದೇ ಹೇಳುವುದರಿಂದ ಜನರಲ್ಲಿ ಗೊಂದಲ ನಿರ್ಮಾಣವಾಗುತ್ತದೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಮ್ಮ ಸ್ಥಿತಿಯಾಗುತ್ತದೆ ಎಂದು ಹೆಬ್ಬಾಳಕರ್ ಹೇಳಿದರು.
ನಾನು ಸಾಮಾನ್ಯ ಹಳ್ಳಿಯ ಕುಟುಂಬದಿಂದ ಬಂದವಳು. ರಾಜಕಾರಣವನ್ನೇ ಇಷ್ಟಪಟ್ಟು ಬಂದವಳು. ಆದೆರ ನನಗೆ ನಾನೇ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡಿದ್ದೇನೆ. ಅದನ್ನು ಎಂದೂ ದಾಟುವುದಿಲ್ಲ. ನಾನು ತಪ್ಪು ಮಾಡಿದಾಗ ತಿದ್ದಿ ಹೇಳಿ.
ಆದರೆ ನೈಜ ಸುದ್ದಿ ಪ್ರಕಟಿಸಿ. ವಿಷಯಾಂತರ ಆಗುವುದು ಬೇಡ. ನಿಮ್ಮ ಸಹಕಾರವಿರಲಿ, ನಾವೆಲ್ಲ ಸೇರಿ ಅರ್ಥಪೂರ್ಣ ಕೆಲಸ ಮಾಡೋಣ. ಸರಕಾರದಿಂದ ಆಗಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ಗಮನ ಸೆಳೆದರೆ ಕೆಲಸ ಮಾಡಲು ಅನುಕೂಲವಾಗುತ್ತದೆ. ರಾಜಕಾರಣಕ್ಕಿಂತ ಅಭಿವೃದ್ಧಿ ಕುರಿತು ಹೆಚ್ಚು ಸುದ್ದಿ ಮಾಡುವಂತಾಗಲಿ ಎಂದು ಅವರು ಆಶಿಸಿದರು.
ಪತ್ರಿಕಾ ವಿತರಕರಿಗೆ ಸೈಕಲ್ ಕೊಡುವ ಕೆಲಸವನ್ನು ಶ್ಲಾಘಿಸಿದ ಅವರು, ಸರಕಾರ ಸಹ ಪತ್ರಕರ್ತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ನಿವೃತ್ತ ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗಿದೆ. ಪತ್ರಕರ್ತರಿಗೆ ನಿವೇಶನ ಕೊಡುವ ಕುರಿತು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.