ವಿಜಯಪುರ: ಬಿಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣ ವಿರುದ್ಧ ತೊಡೆ ತಟ್ಟಿರುವ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS ESHWARAPPA) ಇದೀಗ ಮತ್ತೊಂದು ಸಂಘಟನೆಗೆ ಮುಂದಾಗಿದ್ದಾರೆ. ವಿಜಯಪುರದಲ್ಲಿ (VIJAYAPUR) ಬೆಂಬಲಿಗರೊಂದಿಗೆ ಸಭೆ ಸೇರಿ ಚರ್ಚಿಸಿ ಅಂತಿಮವಾಗಿ ಹಿಂದುತ್ವದ ಹೆಸರಿನಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸಂಘಟನೆ ಮಾಡುವುದಾಗಿ ಘೋಷಿದ್ದಾರೆ. ಇಂದು ವಿಜಯಪುರ ತಾಲೂಕಿನ ಮಹಲ್ ಐನಾಪುರ ಗ್ರಾಮದಲ್ಲಿರುವ ಹುಲಜಂತಿ ಮಠದ ಆವರಣದಲ್ಲಿ ಮಠಾಧೀಶರು, ಬೆಂಬಲಿಗರೊಂದಿಗೆ ಸಭೆ ನಡೆಸಿದರು.
ಈ ಮೂಲಕ ಬಿಜೆಪಿಯಿಂದ ಆಚೆಯಿರುವ ಈಶ್ವರಪ್ಪ, ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಾಗೂ ಯಡಿಯೂರಪ್ಪ ಕುಟುಂಬ ರಾಜಕಾರಣ ವಿರೋಧಿಸುವವರನ್ನು ಒಂದೆಡೆ ಸೇರಿಸುವ ಉದ್ದೇಶ ಇದಾಗಿದೆ ಎನ್ನಬಹುದು. ಇನ್ನು ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ‘ರಾಯಣ್ಣ ಬ್ರಿಗೇಡ್ ಮಾದರಿಯಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆ ಮಾಡಲು ಮುಂದಾಗಿದ್ದೇ. ಎಲ್ಲಾ ಸ್ವಾಮೀಜಿಗಳ ಜಗದ್ಗುರುಗಳ ಬೆಂಬಲ ಸಿಕ್ಕಿದೆ. ಇದೇ ಮುಂದಿನ ತಿಂಗಳ ಅಕ್ಟೋಬರ್ 20 ರಂದು ಬಾಗಲಕೋಟೆಯಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು.
ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದಾಗ ಏನೆಲ್ಲಾ ಆಯಿತು ಎಂದು ಎಲ್ಲರಿಗೂ ಗೊತ್ತಿರೋ ವಿಚಾರವಾಗಿದೆ. ಈಗ ಮುಂದೆ ಇಡುವ ಈ ಹೆಜ್ಜೆ ಹಿಂದೆ ಇಡಲ್ಲ. ಬಾಗಲಕೋಟೆಯಲ್ಲಿ ನಡೆಯೋ ಸಭೆಗೆ ಧೈರ್ಯವಿದ್ದವರು, ಗಟ್ಟಿಯಿದ್ದವರು ಮಾತ್ರ ಬನ್ನಿ. ಇದಕ್ಕೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷ ಸಂಬಂಧವಿಲ್ಲ. ಎಲ್ಲಾ ಸಮಾಜದವರೂ ಸಭೆಗೆ ಬರಬೇಕೆಂದು ಮನವಿ ಮಾಡಿಕೊಂಡರು. ಇತರೆ ಸಮಾಜದ ಸ್ವಾಮೀಜಿಗಳ ಜೊತೆಗೆ ನಮ್ಮ ಸಮಾಜದ ಸ್ವಾಮೀಜಿಗಳು ಸಭೆ ನಡೆಯಲಿ. ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳ ಪ್ರಮುಖರು ಸೇರಲಿ. ಸುದೀರ್ಘವಾಗಿ ಸಭೆಯಲ್ಲಿ ಚರ್ಚೆ ಮಾಡಿ ಬಳಿಕ ರಾಜ್ಯ ಮಟ್ಟದ ಸಭೆ ನಡೆಸಲು ಮುಂದಿನ ತೀರ್ಮಾನ ತೆಗೆದುಕೊಳ್ಳೋಣ. ಈಶ್ವರಪ್ಪಗೆ ಅನ್ಯಾಯವಾಗಿದೆ. ಅವರಿಗೆ ಸಿಎಂ ಮಾಡಲಿಲ್ಲ ಎಂದು ಯಾರೂ ಹೇಳಬೇಡಿ. ಇಲ್ಲಿ ಬಹಳ ಜನರಿಗೆ ಅನ್ಯಾಯವಾಗಿದೆ. ಹೊಸ ಸಂಘಟನೆಯಿಂದ ಹಿಂದೂತ್ವಕ್ಕೆ ಯಶಸ್ಸು ಸಿಗುತ್ತದೆ ಎಂದರು.
ಬಳಿಕ ಈಶ್ವರಪ್ಪ ಪುತ್ರ ಕಾಂತೇಶ ಸೇರಿದಂತೆ ಇತರೆ ಮಠಾಧೀಶರು, ಮುಖಂಡರು ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಕಾಂತೇಶ, ‘ಹೊಸ ಸಂಘಟನೆ ಹಿಂದೂತ್ವದ ಸಂಘಟನೆ ಮಾಡಬೇಕೆಂದು ಅನೇಕರ ಒತ್ತಡವಿದೆ. ಎಲ್ಲರ ಅಭಿಲಾಷೆ ಸ್ವಾಮೀಜಿಗಳ ಆಶೀರ್ವಾದದಂತೆ ಹೊಸ ಸಂಘಟನೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ಸಿಗಬೇಕು. ದಲಿತ ಹಿಂದುಳಿದ ಸಮಾಜದ ಪ್ರತಿ ನಾಯಕರೂ ಬೆಳೆಯಬೇಕು. ನೀವೆಲ್ಲರೂ ನೀಡುವ ಮಾರ್ಗದರ್ಶನದ ಮೂಲಕ ಕೆಲಸವಾಗಬೇಕು. ಕೇವಲ ಹಿಂದುಳಿದ ದಲಿತ ವರ್ಗ ಅಲ್ಲ, ಇಡೀ ಹಿಂದೂ ಸಮಾಜ ಜೊತೆಗೂಡಿಸಿಕೊಂಡು ಹೋದರೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.