Ad imageAd image

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ; ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ

ratnakar
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ; ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ
WhatsApp Group Join Now
Telegram Group Join Now

ಬೆಳಗಾವಿ: ಭವಿಷ್ಯದಲ್ಲಿ ಕಿತ್ತೂರು ನಾಡಿನ ಇತಿಹಾಸ ಉಳಿಸಲು ಕಿತ್ತೂರು ಕೋಟೆಯ ಐತಿಹಾಸಿಕ ಅವಶೇಷಗಳ ಸಂರಕ್ಷಿಸಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಿತ್ತೂರು ಕೋಟೆಯನ್ನು ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಯೋಜನೆ ರೂಪಿಸಲಾಗಿದೆ. 30 ಕೋಟಿ ಅನುದಾನದಲ್ಲಿ ಹೊಸ ತಂತ್ರಜ್ಞಾನ ಬಳಕೆಯ ಮೂಲಕ ವಿದ್ಯುನ್ಮಾನ ಮಾದರಿಯ ಉದ್ಯಾನವನ(ಥೀಮ್ ಪಾರ್ಕ್) ನಿರ್ಮಾಣ ಮಾಡಲಾಗುವುದು ಎಂದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಹೇಳಿದರು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಕಿತ್ತೂರು ಕೋಟೆ ಆವರಣದಲ್ಲಿ ಮಂಗಳವಾರ (ಅ.08) ನಡೆದ ಚನ್ನಮ್ಮನ ಕಿತ್ತೂರಿನ ಕೋಟೆ, ಅರಮನೆ ಸಂರಕ್ಷಣಾ ಕಾಮಗಾರಿಯ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೋಟೆಯ ಮಹಾದ್ವಾರ, ಗೋಡೆಗಳು ಸೇರಿಂತೆ ವಿವಿಧ ಅವಶೇಷಗಳನ್ನು ಸಂರಕ್ಷಿಸಲು ರೂ. 12.11 ಕೋಟಿ ಹಾಗೂ ಇನ್ನಿತರ ಕಾಮಗಾರಿಗಳಿಗೆ 2.4 ಕೋಟಿ ಅನುದಾನ ಬಳಕೆಯಾಗಲಿದೆ. ಕಳೆದ ಒಂದು ವರ್ಷದಿಂದ ಈ ಭಾಗದ ಶಾಸಕರ ಬೇಡಿಕೆಯಿತ್ತು ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಟೆ ಅಭಿವೃದ್ಧಿಗೆ ಕೂಡಲೇ ಅನುದಾನ ಮಂಜೂರು ಮಾಡಿದರು ಎಂದು ತಿಳಿಸಿದರು.

ಕೋಟೆಯ ಕೆಲವು ಭಾಗ ಶೀಥಿಲಗೊಂಡಿದ್ದು, ಇನ್ನಷ್ಟು ದುರಸ್ಥಿ ಕಾಮಗಾರಿಯ ಅವಶ್ಯಕತೆಯಿದೆ. ಕೋಟೆಯ ಕುಸಿದ ಗೋಡೆಗಳನ್ನು ನವೀಕರಿಸಿ ಕೋಟೆ ಅವಶೇಷಗಳ ಸಂರಕ್ಷಣೆಯ ಮೂಲಕ ಇತಿಹಾಸ ಉಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಅತೀ ಅವಶ್ಯಕವಾದ ವಿವಿಧ ಕಾಮಗಾರಿಗಳನ್ನು ಸುಮಾರು 12.11 ಕೋಟಿ ಅನುದಾನದಲ್ಲಿ ದುರಸ್ಥಿಮಾಡಿ ಸಂರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪುರಾತತ್ವ ಇಲಾಖೆಯ ಸಹಯೋಗದೊಂದಿಗೆ ಕೋಟೆ ದುರಸ್ಥಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮೂಲ ಪದ್ಧತಿ ಅನ್ವಯ ದುರಸ್ಥಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಅವಶೇಷಗಳ ಉಳಿವಿಗೆ ಮೊದಲ ಆದ್ಯತೆ:

ಕಿತ್ತೂರಿನ 200 ವರ್ಷದ ವಿಜಯೋತ್ಸವದಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಉದ್ದೇಶವಾಗಿತ್ತು ಆದರೆ ಇನ್ನಷ್ಟು ಭದ್ರ ಕೆಲಸವಾಗಬೇಕು ಎಂಬುದು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಸಮಯ ತೆಗೆದುಕೊಂಡು ಕಾಮಗಾರಿಗಳನ್ನು ಪ್ರಾರಂಭಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕೋಟೆ ಮರು ನಿರ್ಮಾಣಕ್ಕೆ ಈಗಾಗಲೇ ಸಾಕಷ್ಟು ಬಾರಿ ಯೋಚಿಸಲಾಗಿದೆ ಆದರೆ ಅರಮನೆಯ ಮೂಲ ವಿನ್ಯಾಸದ ಮಾಹಿತಿಯಿಲ್ಲದ ಕಾರಣ ಮರು ನಿರ್ಮಾಣ ವಿಳಂಬವಾಗುತ್ತಿದೆ. ಸದ್ಯಕ್ಕೆ ಉಳಿದ ಅವಶೇಷಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ತ್ವರಿತವಾಗಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಸ್ವಚ್ಚತೆ ನಿರ್ವಹಣೆ ಜೊತೆಗೆ ಕೋಟೆ ಉದ್ಯಾನವನ ಅಭಿವೃದ್ಧಿ ಪಡಿಸಲಾಗುವುದು. 3 ಕೋಟಿ ಅನುದಾನ ವೆಚ್ಚದಲ್ಲಿ ರಾಣಿ ಚನ್ನಮ್ಮನ ಭವನ ನಿರ್ಮಾಣದ ಹಂತದಲ್ಲಿದೆ. ಒಟ್ಟು ಅಂದಾಜು 18 ಕೋಟಿ ರುಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ಉತ್ತರ ಕರ್ನಾಟಕದ ಕಿತ್ತೂರು ಭಾಗವನ್ನು ದೊಡ್ಡ ಪ್ರವಾಸಿ ತಾಣವಾಗಿ ಮಾರ್ಪಡು ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. 30 ಕೋಟಿ ಅನುದಾನದಲ್ಲಿ ಕಿತ್ತೂರು ಇತಿಹಾಸವನ್ನು ಇಂದಿನ ಪೀಳಿಗೆ ಪರಿಚಯಿಸಲು ಆಧುನಿಕ ಮಾದರಿಯ ಉದ್ಯಾನವನ ನಿರ್ಮಾಣ ಮಾಡಲು ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದರು.

ಕಿತ್ತೂರು ಕೋಟೆ ಅಭಿವೃದ್ಧಿ ಬಹಳ ಅರ್ಥಪೂರ್ಣವಾದ ಕೆಲಸ. ಕಿತ್ತೂರು ಭಾಗದ ಅಭಿವೃದ್ಧಿಗೆ ಸ್ಥಳೀಯ ಶಾಸಕರು ಸಾಕಷ್ಟು ಉತ್ಸಾಹಕರಾಗಿದ್ದಾರೆ. ಈ ಬಾರಿ ಕಿತ್ತೂರು ಉತ್ಸವಕ್ಕೆ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಇತಿಹಾಸದ ಅರಿಯದೆ ಭವಿಷ್ಯದಲ್ಲಿ ಅಭಿವೃದ್ಧಿ ಸಾದ್ಯವಿಲ್ಲ. ಹಾಗಾಗಿ ಬ್ರಿಟಿಷರಿಗೆ ನಡುಕ ಹುಟ್ಟಿಸಿ ವೀರತನ ತೋರಿದ ಕಿತ್ತೂರು ನಾಡಿನ ಹೆಮ್ಮೆ ನಮ್ಮ ಮಣ್ಣಿನ ಇತಿಹಾಸವಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನದಿಂದ ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದೇವೆ ಆದ್ದರಿಂದ ಇತಿಹಾದ ಉಳಿವಿಗೆ ಇಂತಹ ಸಂರಕ್ಷಣಾ ಕಾರ್ಯ ನಿರ್ವಹಿಸಬೇಕಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ಯುವ ಪೀಳಿಗೆಗೆ ಇತಿಹಾಸ ಪರಿಚಯಿಸುವುದು ಮೂಲ ಉದ್ದೇಶ:

ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಭಾಗ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಮಾದರಿ ಉದ್ಯಾನವನ ನಿರ್ಮಾಣ ಮಾಡಲಾಗುವುದು. ಕಿತ್ತೂರಿನ ಅವಶೇಷಗಳನ್ನು ಸಂರಕ್ಷಣೆ ಮಾಡುವುದರ ಮೂಲಕ ಯುವ ಪೀಳಿಗೆಗೆ ಇತಿಹಾಸ ಪರಿಚಯಸಲಾಗುವುದು. ಮುಂದಿನದಿನಗಳಲ್ಲಿ ಪ್ರಾಧಿಕಾರದಿಂದ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಕಿತ್ತೂರು ಸಂಸ್ಥಾನ ಕಲ್ಮಠದ ರಾಜಗುರು ಮಡಿವಾಳ ಶ್ರೀ ರಾಜಯೋಗೀಂದ್ರ ಮಹಾಸ್ವಾಮೀಜಿ, ನಿಚ್ಚನಿಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಕಿತ್ತೂರು ತಹಶೀಲ್ದಾರ್ ರವೀಂದ್ರ ಹಾದಿಮನಿ ಸೇರಿದಂತೆ ಕಿತ್ತೂರು ರಾಣಿ ಚನ್ನಮ್ಮನ ಅಭಿಮಾನಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಭೂಮಿ ಪೂಜೆ; ಶಂಕುಸ್ಥಾಪನೆ:

ಇದಕ್ಕೂ ಮುಂಚೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಕಿತ್ತೂರು ಕೋಟೆ ಆವರಣದಲ್ಲಿ ರೂ. 12.11 ಕೋಟಿ ಹಾಗೂ 2.4 ಕೋಟಿ ಅನುದಾನದ ಚನ್ನಮ್ಮನ ಕಿತ್ತೂರಿನ ಕೋಟೆ, ಅರಮನೆ ಅವಶೇಷಗಳ ಸಂರಕ್ಷಣೆಯ ವಿವಿಧ ಕಾಮಗಾರಿಯ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಿತ್ತೂರು ಕಲ್ಮಠ ಸಂಸ್ಥಾನ ರಾಜಗುರು ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ, ನಿಚ್ಚನಿಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಹಾಜರಿದ್ದರು.

WhatsApp Group Join Now
Telegram Group Join Now
Share This Article