ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ನೊಳಗೆ ಕಲಹ ಸೃಷ್ಟಿಸಿರುವ ‘ಗದ್ದುಗೆ ಗುದ್ದಾಟ’ಕ್ಕೆ ಕಡಿವಾಣ ಹಾಕಲು ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕಿಳಿದಿದ್ದಾರೆ. ಪವರ್ ಶೇರಿಂಗ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ತೀರ್ಮಾನ ಮಾಡಲು ನಾವಿದ್ದೇವೆ. ಯಾವಾಗ ಏನು ನಿರ್ಣಯ ಮಾಡಬೇಕೋ ನಾವು ಮಾಡುತ್ತೇವೆ. ಬಾಯಿ ಮುಚ್ಚಿಕೊಂಡು ಕೊಟ್ಟಿರುವ ಕೆಲಸ ಮಾಡಿ ಎಂದು ರಾಜ್ಯ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ವರಿಷ್ಠರ ಅಂಗಳದಲ್ಲಿನ ‘ಪವರ್ ಶೇರಿಂಗ್’ ಗುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವ ಹಾಗೂ ಒಬ್ಬರಿಗೆ ಒಂದೇ ಹುದ್ದೆ ಮಾನದಂಡದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡುವಂತೆ ಹಿರಿಯ ಸಚಿವರೇ ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳಿಂದ ಪಕ್ಷ ಮತ್ತು ಸರಕಾರಕ್ಕೆ ಡ್ಯಾಮೇಜ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ. ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕಾದ ವಿಚಾರಗಳ ಬಗ್ಗೆ ಅನಗತ್ಯ ಮಾತು ನಿಲ್ಲಿಸುವಂತೆ ಫರ್ಮಾನು ಹೊರಡಿಸಿದ್ದಾರೆ.