ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮೆಂಡೇಗಾಳಿ ಗ್ರಾಮದಲ್ಲಿ ನಕಲಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದ ಜಾಲವನ್ನು ಟಿಎಚ್‌ಒ ಡಾ.ಸಂಜೀವ ನಾಂದ್ರೆ ಮತ್ತು ಸಿಬ್ಬಂದಿ ಸೋಮವಾರ ಪತ್ತೆ ಹಚ್ಚಿದ್ದಾರೆ. ತಾಲ್ಲೂಕಿನ ಮೆಂಡೇಗಾಳಿ ಗ್ರಾಮದ ವಾಸು ಗುರವ ಮತ್ತು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಇಸ್ಮಾಯಿಲ್ ಬೀಡಿಕರ ಎನ್ನುವವರು ಭಾಗಿಯಾಗಿದ್ದು, ಅವರನ್ನು ದಾಖಲೆ ಸಹಿತ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ವಾಸು,ಸಂಧ್ಯಾ ಸುರಕ್ಷಾ ಯೋಜನೆಯ ಅರ್ಜಿಗಳನ್ನು ಹಿಡಿದು ಹೋಗುತ್ತಿದ್ದಾಗ, ಆಸ್ಪತ್ರೆಯಲ್ಲಿ ಸಿಬ್ಬಂದಿ ನೋಡಿ, ವಿಚಾರಿಸಿದಾಗ ಗಾಬರಿಯಿಂದ ತಪ್ಪಿಸಿಕೊಳ್ಳಲು ವಾಸು ಯತ್ನಿಸಿದ್ದಾನೆ. ಆದರೆ ಸಿಬ್ಬಂದಿಯು ಆತನನ್ನು ಹಿಡಿದು ಮುಖ್ಯ ವೈದ್ಯಾಧಿಕಾರಿಯೂ ಆದ ಟಿಎಚ್‌ಒ ನಾಂದ್ರೆ ಬಳಿಗೆ ಕರೆದೊಯ್ದಿದ್ದಾರೆ.
ಅಲ್ಲಿ ದಾಖಲೆಗಳನ್ನು ಪರಿಶೀಲಿಸಿ ವಿಚಾರಿಸಿದಾಗ, ಇಸ್ಮಾಯಿಲ್ ಹಲವು ತಿಂಗಳುಗಳಿಂದ ವೈದ್ಯಕೀಯ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿ ಕೊಡುತ್ತಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಮತ್ತು ವೈದ್ಯರ ನಕಲಿ ರಬ್ಬರ್ ಸ್ಟ್ಯಾಂಪ್ ಬಳಸಿ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಮಾಡಿಕೊಡುತ್ತಿದ್ದೆ ಎಂದು ಇಸ್ಮಾಯಿಲ್ ಒಪ್ಪಿಕೊಂಡಿದ್ದಾನೆ.
ಇಸ್ಮಾಯಿಲ್ ಮನೆಯಲ್ಲಿದ್ದ ನಕಲಿ ರಬ್ಬರ್ ಸ್ಟ್ಯಾಂಪ್ ಹಾಗೂ ಇತರ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.ದೂರು ದಾಖಲಿಸಿಕೊಂಡ ಖಾನಾಪುರ ಪೊಲೀಸರು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.