ಬೆಳಗಾವಿ: ಪ್ರತಿವರ್ಷದಂತೆ ಈ ಬಾರಿಯೂ ನ.1 ರಂದು ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು; ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ.1 ರಂದು ದೀಪಾವಳಿ ಹಬ್ಬದ ದಿನವೇ ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವದು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನ.1 ರಂದು ದೀಪಾವಳಿ ಇರುವ ಹಿನ್ನಲೆಯಲ್ಲಿ ಅದೇ ದಿನ ರಾಜ್ಯೋತ್ಸವ ಆಚರಣೆ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕ ನ.1 ರಂದೇ ರಾಜ್ಯೋತ್ಸವ ಆಚರಿಸಲು ತೀರ್ಮಾನಿಸಲಾಯಿತು.
ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಕನ್ನಡ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು. ಅಲ್ಲದೇ ಈ ಬಾರಿ ಕನ್ನಡ ಪರ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಸನ್ಮಾನಿಸಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುವುದು. ಈ ಬಾರಿ ರಾಜ್ಯೋತ್ಸವ ಮೆರವಣಿಗೆಗೆ ಆಗಮಿಸುವ ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲೆ ಕರ್ನಾಟಕದಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡಿದ ಮಹನೀಯರ ಭಾವಚಿತ್ರಗಳನ್ನು ಮೆರವಣಿಗೆ ಮಾರ್ಗದುದ್ದಕ್ಕೂ ಅಳವಡಿಸಬೇಕು ಎಂದು ಮೆಹಬೂಬ್ ಮಕಾನದಾರ ಅವರು ನೀಡಿದ ಸಲಹೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಬಾರಿಯ ಮೆರವಣಿಗೆಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ರೂಪಕಗಳಿಗೆ ಪ್ರಶಸ್ತಿ ನೀಡುವುದರ ಜತೆಗೆ ರಾಣಿ ಚನ್ನಮ್ಮನ ಮೂರ್ತಿಗೆ ಆಕಾಶದಿಂದ ಪುಷ್ಪವೃಷ್ಟಿ ಮಾಡಲು ಪ್ರಯತ್ನಿಸಲಾಗುವದು ಎಂದರು.
ಕರಾಳ ದಿನಾಚರಣೆಗೆ ವಿರೋಧ:
ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂಬ ಕನ್ನಡ ಪರ ಸಂಘಟನೆಗಳ ಒಕ್ಕೊರಲಿನ ಮನವಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿಗಳು, ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸಭೆಗೆ ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಅಶೋಕ ಚಂದರಗಿ ಹೆಸರು ಶಿಫಾರಸ್ಸು:
ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿಗಾಗಿ ಕನ್ನಡ ಪರ ಹೋರಾಟಗಾರರಾದ ಅಶೋಕ ಚಂದರಗಿ ಅವರ ಹೆಸರನ್ನು ಶಿಫಾರಸ್ಸು ಮಾಡಬೇಕು ಎಂಬ ಕನ್ನಡ ಪರ ಸಂಘಟನೆಗಳ ಒಕ್ಕೊರಲಿನ ಒತ್ತಾಯದಂತೆ ಅವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿರುವ ವೇದಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವೇದಿಕೆ ಸಿದ್ಧತೆ, ಧ್ವಜಾರೋಹಣ, ಆಂತ್ರಣ ಪತ್ರಿಕೆ, ಪಥಸಂಚಲನ, ಸಾಧಕರಿಗೆ ಸನ್ಮಾನ, ಮೆರವಣಿಗೆ, ರೂಪಕ ವಾಹನಗಳಿಗೆ ಅನುಮತಿ, ಸಾಂಸಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಕನ್ನಡ ಪರ ಹೋರಾಟಗಾರರಾದ ಶ್ರಿನಿವಾಸ ತಾಳೂಕರ ಅವರು ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ ಈ ಹಿನ್ನಲೆಯಲ್ಲಿ ಹೆಚ್ಚಿನ ಕನ್ನಡ ಪರ ಹೋರಾಟಗಾರರಿಗೆ ಸನ್ಮಾನಿಸಲು ಸಲಹೆ ನೀಡಿದ ಅವರು ರಾಜ್ಯೊತ್ಸವದ ಮೆರವಣಿಗೆಯಲ್ಲಿ ವಿವಾದಾತ್ಮಕ ಧ್ವಜಗಳಿಗೆ ಅನುಮತಿ ನೀಡಬಾರದು ಎಂದರು.
ದೀಪಕ ಗುಡಗನಟ್ಟಿ ಮಾತನಾಡಿ, ಕಳೆದ ಬಾರಿಯಂತೆಯೇ ಈ ಬಾರಿಯು ಚನ್ನಮ್ಮ ವೃತ್ತದ ಪುಷ್ಪಾಲಂಕಾರವನ್ನು ಮಾಡಬೇಕು. ರಾಜ್ಯೋತ್ಸವ ವೀಕ್ಷಣೆಗೆ ಬರುವ ಸಾರ್ವಜನಿಕರ ವಾಹನಗಳಿಗೆ ಸೂಕ್ತ ನಿಲುಗಡೆಗೆ ವ್ಯವಸ್ಥೆ, ರೂಪಕ ವಾಹನಗಳಿಗೆ ಗೌರವ ಧನ ನೀಡಲು ಹಾಗೂ ರೂಪಕ ವಾಹನಗಳ ಮೆರವಣಿಗೆಗೆ ಹೆಚ್ಚಿನ ಸಮಯವಕಾಶ ನೀಡಲು ಮನವಿ ಮಾಡಿದರು. ಮಹದೇವ ತಳವಾರ ಅವರು, ಸಾಧಕರ ಸನ್ಮಾನದಲ್ಲಿ ಕೇವಲ ಕನ್ನಡ ಪರ ಹೋರಾಟಗಾರರನ್ನು ಮಾತ್ರ ಸನ್ಮಾನಿಸಬೇಕು. ಸನ್ಮಾನ ಸಂದರ್ಭದಲ್ಲಿ ಶಾಶ್ವತವಾಗಿ ಇರುವಂತಹ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲು ಸಲಹೆ ನೀಡಿದರು.
ಮೆಹಬೂಬ ಮಕಾನದಾರ ಅವರು, “ಸನ್ಮಾನಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರರನ್ನು, ಸಾಧಕರನ್ನು ಗುರುತಿಸಲು ಪ್ರತ್ಯೇಕ ಸಮಿತಿಯನ್ನು ರಚಿಸಬೇಕು. ಈ ಸಮಿತಿ ಪ್ರತಿವರ್ಷ ಪುನರ್ ರಚನೆಯಾಗಬೇಕು. ಕಳೆದ ಬಾರಿ ರಾಜ್ಯೋತ್ಸವಕ್ಕಿಂತ ಈ ಬಾರಿ ವಿಜೃಂಭಣೆಯಿಂದ ಆಚರಣೆಯಾಗಬೇಕು. ಮೆರವಣಿಗೆ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕು. ಮೆರವಣಿಗೆ ಸಾಗುವ ದಾರಿಯಲ್ಲಿ ಕನ್ನಡ ನಾಡಿನ ಮಹನೀಯರ ಭಾವಚಿತ್ರಗಳನ್ನು ಪ್ರದರ್ಶಿಸಬೇಕು. ಅಲ್ಲದೇ ರಾಣಿ ಚನ್ನಮ್ಮನ ಮೂರ್ತಿಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪ ವೃಷ್ಟಿ ಮಾಡಬೇಕು” ಎಂದು ಸಲಹೆ ನೀಡಿದರು.
ರಾಜೀವ ಟೋಪಣ್ಣವರ ಅವರು ಮಾತನಾಡಿ, ಈ ಬಾರಿ ರಾಜ್ಯೊತ್ಸವ ಮೆರವಣಿಗೆಯಲ್ಲಿ ಬೇರೆ ಬೇರೆ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು. ಮೈಸೂರು ದಸರಾ ಮಾದರಿ ರೀತಿ ಮೆರವಣಿಗೆ ಜರುಗಿಸಲು ಸಲಹೆ ನೀಡಿದರು. ಸಂಘಟನೆಗಳ ಮುಖಂಡ ಮಲ್ಲೇಶ್ ಚೌಗಲೆ, ಮಹೇಶ್ ಶೀಗಿಹಳ್ಳಿ, ರಾಜೇಂದ್ರ ಸೊಂಟಕ್ಕಿ ಸೇರಿದಂತೆ ವಿವಿಧ ಪದಾಧಿಕಾರಿಗಳು ರಾಜ್ಯೋತ್ಸವ ಆಚರಣೆ ಕುರಿತು ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ನಗರ ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ ಶಿಂಧೆ ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ದಿನೇಶಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ಇಲಾಖೆಗಳ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.