ಬೆಂಗಳೂರು: ಕನ್ನಡದಲ್ಲಿ ತೀರ್ಪು ನೀಡಿ ಕರ್ನಾಟಕ ಹೈಕೋರ್ಟ್ ಹೊಸ ಇತಿಹಾಸ ಬರೆದಿದೆ. ಕನ್ನಡ ಆಡಳಿತ ಭಾಷೆಯಷ್ಟೇ ಅಲ್ಲ, ನ್ಯಾಯದಾನದ ಭಾಷೆಯೂ ಕನ್ನಡ ಆಗಬೇಕು ಎನ್ನುವ ಕೂಗಿಗೆ ಸ್ಪಂದಿಸಿರುವ ಹೈಕೋರ್ಟ್ ಗುರುವಾರ ಕನ್ನಡದಲ್ಲೇ ತೀರ್ಪು ನೀಡಿದೆ.
ನ್ಯಾ.ಕೃಷ್ಣ ಎಸ್ ದೀಕ್ಷಿತ್, ಸಿಎಂ ಜೋಶಿ ಅವರಿದ್ದ ವಿಭಾಗೀಯ ಪೀಠ ನೀಡಿದ ಈ ತೀರ್ಪು, ಬುಧವಾರವಷ್ಟೇ ಆಚರಿಸಲ್ಪಟ್ಟಿದ್ದ ಭಾರತ ಭಾಷಾ ದಿನವನ್ನು ಸ್ಮರಣೀಯವಾಗಿಸಿದೆ. ಪಟ್ಟನಾಯಕನಹಳ್ಳಿ ಮಠದ ಸ್ವಾಮೀಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಭಾಗೀಯ ಪೀಠ ಕನ್ನಡದಲ್ಲಿ ತೀರ್ಪು ನೀಡಿದೆ. ತೀರ್ಪಿನ ಆಪರೇಟಿವ್ ಭಾಗವನ್ನು ನ್ಯಾ.ಕೃಷ್ಣ ದೀಕ್ಷಿತ್ ಕನ್ನಡದಲ್ಲಿಯೇ ಓದಿದ್ದಾರೆ.
ಕನ್ನಡ ಅವಸಾನ ಆಗಬಾರದು ಎಂದರೇ ಕನ್ನಡಕ್ಕೆ ಮಾನ್ಯತೆ ಸಿಗಬೇಕು, ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲೇ ವ್ಯವಹಾರ ನಡೆಯಬೇಕು ಎಂದು ನ್ಯಾ.ಕೃಷ್ಣದೀಕ್ಷಿತ್ ಪ್ರತಿಪಾದಿಸಿದರು.