ಬಾಗಲಕೋಟೆ: ಫೋಟೋಗ್ರಫಿ ಮತ್ತು ಸಾಕ್ಷ್ಯಚಿತ್ರ ನಿರ್ಮಾಣ ಕ್ಷೇತ್ರಗಳು ಮುಂಚೂಣಿಯಲ್ಲಿದ್ದು ಇವುಗಳ ಕಲಿಕೆಯಿಂದ ಕೌಶಲ್ಯಾಭಿವೃದ್ಧಿಯ ಜೊತೆಗೆ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು. ರಾಠೋಡ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಛಾಯಾಗ್ರಹಣ ಮತ್ತು ಸಾಕ್ಷ್ಯಚಿತ್ರ ನಿರ್ಮಾಣ ವಿಷಯದ ಸರ್ಟಿಫಿಕೇಟ್ ಕೋರ್ಸ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಟಿಫಿಕೇಟ್ ಕೋರ್ಸ್ನಿಂದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಯುತ್ತದೆ. ಪೋಟೋ, ಸಾಕ್ಷ್ಯಚಿತ್ರಗಳ ಪಾತ್ರ ಇಂದಿನ ದಿನಮಾನಗಳಲ್ಲಿ ದೊಡ್ಡದಾಗಿದ್ದು ಅತಿ ಹೆಚ್ಚು ಬೇಡಿಕೆ ಇರುವ ಕ್ಷೇತ್ರವಾಗಿದೆ ಎಂದರು.
ಆಸಕ್ತಿ ಮತ್ತು ಕ್ರೀಯಾಶೀಲತೆಯಿಂದ ಕೂಡಿದರೆ ಮಾತ್ರ ಈ ಕ್ಷೇತ್ರದಲ್ಲಿ ಸಾಧನೆ ಸಾಧ್ಯ. ನಿರಂತರ ಛಾಯಾಗ್ರಹಣದ ಹವ್ಯಾಸ ಇರಲಿ. ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರವಾಗಿರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕ್ಷೇತ್ರದತ್ತ ಹೆಜ್ಜೆಹಾಕಬೇಕು ಎಂದರು.
ಪ್ರಾಚಾರ್ಯರಾದ ಎಸ್.ಆರ್. ಮೂಗನೂರಮಠ ಅವರು ಮಾತನಾಡಿ. ಪೋಟೊಗ್ರಾಫಿಯು ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ. ಒಂದು ಸಂಕೇತ ಹತ್ತು ಶಬ್ದಗಳಿಗೆ ಸಮವಾಗಿದ್ದು ಫೋಟೋಗ್ರಫಿಯೂ ಕೂಡ ಇದೇ ಮೂಲಾಧಾರದಿಂದ ಬೆಳೆದಿದೆ. ಉತ್ತಮ ಫೋಟೋಗಳ ಕಳೆದು ಹೋದ ಸಮಯವನ್ನು ಹಿಡಿದಿಡಬಲ್ಲವು. ಸಮಾಜದ ಬದಲಾವಣೆಗೂ ಚಾಯಾಚಿತ್ರಗಳು ಕಾರಣವಾಗಿದ್ದು ಅದಕ್ಕೆ ವ್ಯಂಗ್ಯಚಿತ್ರಗಳು ಉದಾಹರಣೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಐ.ಬಿ.ಚಿಕ್ಕಮಠ, ಎಂ.ಪಿ.ದೊಡವಾಡ , ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.