ಮೈಸೂರು: ಮಹಿಷಾ ದಸರಾ ಒಂದು ರೀತಿ ಅಸಹ್ಯ, ಅನಾಚಾರ. ಮಹಿಷಾ ದಸರಾ ಮೂಲಕ ದೆವ್ವವನ್ನು ದೇವರು ಮಾಡಲು ಹೊರಟ್ಟಿದ್ದಾರೆ. ಮಹಿಷಾ ದಸರಾ ಆಸ್ತಿಕರ ಭಾವನೆಗೆ ನೋವು ತರುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ನಾಡಹಬ್ಬದ ಹಿನ್ನೆಲೆ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರನ ಪ್ರತಿಮೆ ಮುಂದೆ ಮಹಿಷಾ ದಸರಾ ಆಯೋಜನೆ ಮಾಡಲಾಗಿದೆ. ಇದಕ್ಕೆ ತಿರುಗೇಟಾಗಿ ಬಿಜೆಪಿ ಚಲೋ ಚಾಮುಂಡಿ ಬೆಟ್ಟ ಜಾಥಾ ಹಮ್ಮಿಕೊಂಡಿದೆ. ಮಹಿಷಾ ದಸರಾ ದಿನವೇ ಚಾಮುಂಡಿ ಬೆಟ್ಟಕ್ಕೆ ಜಾಥಾ ಹಮ್ಮಿಕೊಳ್ಳಲಾಗಿದೆ.
ಮಹಿಷಾ ದಸರಾ ವಿರೋಧಿಸಿ ಮಾತನಾಡಿರುವ ಪ್ರತಾಪ್ ಸಿಂಹ, ಬಿಜೆಪಿ ಸರ್ಕಾರದಲ್ಲಿ ಮಹಿಷಾ ದಸರಾ ಎಂಬ ಅಸಹ್ಯವನ್ನು ನಿಲ್ಲಿಸಿದ್ದೆವು. ಈಗ ಸಿದ್ದರಾಮಯ್ಯ ಸರ್ಕಾರ ಮತ್ತೆ ಮಹಿಷಾ ದಸರಾ ಮಾಡಲು ಹೊರಟಿದೆ. ಅಕ್ಟೋಬರ್ 13 ರಂದು ಚಲೋ ಚಾಮುಂಡಿ ಬೆಟ್ಟ ಮಾಡುತ್ತೇವೆ. ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಆರಂಭವಾಗುತ್ತದೆ. ಕನಿಷ್ಠ 5,000 ಜನ ಈ ಜಾಥಾದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಇದು ಬಿಜೆಪಿ ಕಾರ್ಯಕ್ರಮವಲ್ಲ. ಇದು ಮೈಸೂರಿನ ಜನರ ಜಾಥಾ. ಅಕ್ಟೋಬರ್ 13 ರಂದು ಮಹಿಷಾ ದಸರಾ ತಡೆಯುವುದೇ ನಮ್ಮ ಜಾಥಾದ ಉದ್ದೇಶ. ಇದು ಪಕ್ಷಾತೀತ ಹೋರಾಟ. ನಾವು ಸಂಘರ್ಷಕ್ಕೂ ಸಿದ್ಧರಿದ್ದೇವೆ. ಅಕ್ಟೋಬರ್ 13 ರಂದು ಚಾಮುಂಡಿಗೆ ಅವಮಾನ ಮಾಡಿ, ಅಕ್ಟೋಬರ್ 15 ರಂದು ಚಾಮುಂಡಿ ತಾಯಿಗೆ ಪೂಜೆ ಮಾಡಿದರೆ ಅದು ಅನೈತಿಕ ಕೆಲಸ. ಮಹಿಷಾ ದಸರಾ ಎಂಬ ಅನಾಚಾರ ನಡೆಯಕೂಡದು ಎಂದು ಪ್ರತಾಪ್ ಸಿಂಹ ಗುಡುಗಿದ್ದಾರೆ.