ಬಳ್ಳಾರಿ: ತುಂಗಭದ್ರಾ ಜಲಾಶಯದ ಸ್ಟಾಪ್ ಲಾಗ್ ಗೇಟ್ ಅಳವಡಿಸುವ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಇಂದು ರಾತ್ರಿ ಮೊದಲ ಎಲಿಮೆಂಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ಮೊದಲ ಎಲಿಮೆಂಟ್‌ನ ಮೇಲ್ಭಾಗದಿಂದ ಈಗ ನೀರು ಹರಿಯುತ್ತಿದೆ. ಇನ್ನೂ ನಾಲ್ಕು ಗೇಟ್ ಅಳವಡಿಸುವ ಪ್ರಕ್ರಿಯೆ ಬಾಕಿಯಿದೆ. ಕನ್ನಯ್ಯ ನಾಯ್ಡು ನೇತೃತ್ವದ ತಂಡದಿಂದ ತಾತ್ಕಾಲಿಕ ಗೇಟ್ ಕೂರಿಸುವ ಕಾರ್ಯಾಚರಣೆ ನಡೆಯುತ್ತಿದ್ದು ಈಗ ಎರಡನೇ ಇದೀಗ ಎರಡನೇ ಎಲಿಮೆಂಟ್ ಅಳವಡಿಸುವ ಕೆಲಸ ಆರಂಭವಾಗಿದೆ.
ರಭಸದಿಂದ ಹರಿವ ನೀರಿನಲ್ಲೇ ಗೇಟ್ ಎಲಿಮೆಂಟ್ ಕೂರಿಸಲು ತಜ್ಞರು ನಡೆಸುತ್ತಿರುವ ಪ್ರಯತ್ನ ಕೊನೆಗೂ ಫಲ ನೀಡಿದ್ದು ಸಚಿವ ಶಿವರಾಜ್ ತಂಗಡಗಿ ಅವರು ಕಾರ್ಮಿಕರ ಜೊತೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಗುರುವಾರ ಜಿಂದಾಲ್ ಕಂಪನಿ ನಿರ್ಮಿಸಿದ್ದ ಗೇಟ್ ಅಳವಡಿಸಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಂದು ಹೊಸ ಗೇಟ್ ಕೂರಿಸುವ ಪ್ರಯತ್ನ ನಡೆಯಿತು. ಕ್ರೇನ್ ಚಲನೆಗೆ 19ನೇ ಗೇಟ್ ಮೇಲ್ಭಾಗದಲ್ಲಿದ್ದ ಸ್ಕೈವಾಕ್ ಅಡ್ಡಿಯಾಗಿದ್ದು, ಅದನ್ನು ತೆರವು ಮಾಡಿ ಈಗ ಎಲಿಮೆಂಟ್ ಅಳವಡಿಸಲಾಗಿದೆ.
ತುಂಗಭದ್ರಾ ಜಲಾಶಯದ ನೀರಿನ ಮಟ್ಟ 65 ಟಿಎಂಸಿಗೆ ಇಳಿದಿದೆ. ಹೊರಹರಿವಿನ ಪ್ರಮಾಣವನ್ನು 86 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ಒಳಹರಿವು 33 ಸಾವಿರ ಕ್ಯೂಸೆಕ್ ಇದೆ.