ಬೆಳಗಾವಿ : ಕರ್ನಾಟಕ ವಿಧಾನಮಂಡಲಗಳ 148ನೇ ಅಧಿವೇಶನವನ್ನು ಉತ್ತರ ಕರ್ನಾಟಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರಣಕ್ಕೆ ಸಹ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲಾಗುತ್ತದೆ.
ಅಂತೆಯೇ ಉತ್ತರ ಕರ್ನಾಟಕ ಭಾಗದ ಹತ್ತಾರು ಸಮಸ್ಯೆ ಸವಾಲುಗಳ ಬಗ್ಗೆ ವಿಶೇಷ ಚರ್ಚೆಗೆ ಅವಕಾಶ ಮಾಡಿಕೊಡಲು ಎರಡು ದಿನ ಮೀಸಲಿಡಬೇಕು ಎಂದು ಇದೆ ವೇಳೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್ ಅವರು ಸಭಾಪತಿಗಳಿಗೆ ಕೋರಿದರು.
ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪರಿಷತ್ ಸಭಾ ನಾಯಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2022ಕ್ಕೆ ಅನುಮೋದನೆ
ಗಡಿ ಪ್ರದೇಶದಲ್ಲಿನ ಸಾರ್ವಜನಿಕ ಹಿತರಕ್ಷಣೆ ಉದ್ದೇಶದಿಂದಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2022ಕ್ಕೆ ವಿಧಾನ ಪರಿಷತ್ತ್ತಿನಲ್ಲಿ ಇಂದು ಅನುಮೋದನೆ ದೊರೆಯಿತು.
ರಾಜ್ಯ ಸರ್ಕಾರವು ನೆಲ ಜಲ ಸಂರಕ್ಷಣೆ ವಿಷಯದಲ್ಲಿ, ಕನ್ನಡಿಗರು ಮತ್ತು ಕನ್ನಡಿಗರ ಬದುಕಿನ ರಕ್ಷಣಗೆ ಸರ್ಕಾರ ಬದ್ಧವಾಗಿದೆ. ಅವಶ್ಯಕತೆ ಇದೆ ಎಂಬುದು ಕಂಡುಬಂದಲ್ಲಿ ತಾಲೂಕಿನ ಹೆಸರನ್ನು ಸೇರಿಸುವ ರಚನೆಗೆ ಅವಕಾಶವಿದೆ. ಅಂಗೀಕಾರ ರೂಪದಲ್ಲಿರುವ ಕಾಯಿದೆಯನ್ನು ಪರ್ಯಾಯಲೋಸಬೇಕು ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ ಬಳಿಕ ಸಭಾಪತಿಗಳು ಪ್ರಸ್ತಾವನೆಯನ್ನು ಮಂಡಿಸಿ ಚರ್ಚೆಗೆ ಅವಕಾಶ ಕಲ್ಪಿಸಿದರು. ವಿಧೇಯಕವನ್ನು ಅಂಗೀಕರಿಸಲು ಸಭಾ ನಾಯಕರು ಕೋರಿದರು. ಬಳಿಕ ಸದನವು ಸರ್ವಾನುಮತದಿಂದ ವಿಧೇಯಕಕ್ಕೆ ಅನುಮೋದನೆ ನೀಡಿತು.
ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ತಿದ್ದುಪಡಿ ವಿಧೇಯಕದ ಚರ್ಚೆ ಮೇಲಿ ಮಾತನಾಡಿ ಗಡಿಭಾಗದ ಪ್ರದೇಶದಲ್ಲಿ ಹೊಸದಾಗಿ ತಾಲೂಕುಗಳನ್ನು ರಚನೆ ಮಾಡುವಾಗ ಕೆಲವು ಹಳ್ಳಿಗಳ ಜನರು ತ್ರಿಶಂಕು ಸ್ಥಿತಿಗೆ ಸಿಲುಕುತ್ತಾರೆ. ಕಾಸರಗೋಡು, ಸೊಲ್ಲಾಪುರ ಸೇರಿದಂತೆ ಗಡಿಭಾಗದಲ್ಲಿ ಕನ್ನಡ ಮಾತನಾಡುವ ಜನರಿಗೆ ಸಹಾಯವಾಗುವ ಕೆಲಸುವ ಈ ವಿಧೇಯಕದಿಂದಾಗಬೇಕು. ಇನ್ನಷ್ಟು ಅಧ್ಯಯನ ಮಾಡಿ ಕಾಯಿದೆಗೆ ಶಕ್ತಿ ತುಂಬಬೇಕು ಎಂದು ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅತಿ ಕಡಿಮೆ ಹಣ ಮೀಸಲಿಡುತ್ತಿರುವ ಕಾರಣಕ್ಕೆ ಹೊಸ ಬಿಲ್ಲಿನ ಉದ್ದೇಶ ಈಡೇರಿಸುವಲ್ಲಿ ವಿಫಲರಾಗಿದ್ದೇವೆ. ಕಾಸರಗೋಡು ಭಾಗದಲ್ಲಿ 100 ಕನ್ನಡ ಶಾಲೆಗಳು ಮುಚ್ಚಿವೆ. ಸೊಲ್ಲಾಪುರ ಸುತ್ತಲಿನ ಪ್ರದೇಶದಲ್ಲಿ ಮಕ್ಕಳು ಹೊರಗಡೆ ಕುಳಿತು ಕಲಿಯುವ ದುಸ್ಥಿತಿಯಿದೆ. ಪ್ರಾಧಿಕಾರಕ್ಕೆ 100 ಕೋಟಿ ಅನುದಾನ ಮೀಸಲಿಟ್ಟು ಗಡಿ ಪ್ರದೇಶದಲ್ಲಿ ಶಿಕ್ಷಣ, ಪಠ್ಯ, ಗ್ರಂಥಾಲಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಉತ್ತೇಜನ ನೀಡಬೇಕು ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಥೋಡ್ ಸಲಹೆ ಮಾಡಿದರು.
ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ಈ ವಿಧೇಯಕ್ಕೆ ಬರೀ ತಿದ್ದುಪಡಿ ಮಾತ್ರ ಸಾಲದು, ಹೊರದೇಶದಲ್ಲಿರುವ ಸಂಘ ಸಂಸ್ಥೆಗಳಿಗೆ ಕೊಡುವಷ್ಟೇ, ಅನುದಾನವನ್ನು ಗಡಿಯಲ್ಲಿರುವ ಕನ್ನಡಿಗರ ಹಿತ ಕಾಪಾಡುವ ನೆರೆ ರಾಜ್ಯದ ಸಂಘ ಸಂಸ್ಥೆಗಳಿಗೆ ನೀಡುಬೇಕು. ಮಸೂದೆಯಿಂದ ಗಡಿಭಾಗದ ಹಳ್ಳಿಗಳ ಅಭಿವೃದ್ಧಿಗೆ ಗಮನ ಕೊಡುವ ಕಾರ್ಯವಾಗಬೇಕು. ಕನ್ನಡದ ಬಗ್ಗೆ ಕಾಳಜಿ ಇರುವ ಸರ್ಕಾರ ಜವಾಬ್ದಾರಿ ವಹಿಸಿ ಕನ್ನಡ ಕಾವಲು ಪಡೆಯನ್ನು ಪುನರ್ರಚಿಸಬೇಕು ಎಂದು ಸಲಹೆ ಮಾಡಿದರು.
ಬರೀ ಭಾಷಾಭಿವೃದ್ಧಿಯಾದರೆ ಸಾಲದು, 100 ಕೋಟಿ ಅನುದಾನ ಜೊತೆಗೆ ಎಲ್ಲಾ ಇಲಾಖೆಗಳಲ್ಲಿ ತಲಾ ಶೇ.5ರಷ್ಟು ಹಣ ಮೀಸಲಿಟ್ಟು ಗಡಿಭಾಗದ ಪ್ರದೇಶದಲ್ಲಿ ಶಾಲೆ, ಆಸ್ಪತ್ರೆ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ಕೊಡಬೇಕು. 371 ಜೆ ಮಾದರಿಯಲ್ಲಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಡಿಭಾಗದ ಕನ್ನಡಿಗರಿಗೆ ಕೂಡಲೇ ಮೀಸಲು ನಿಗದಿ ಮಾಡಬೇಕು ಎಂದು ಸದಸ್ಯ ನಾಗರಾಜ ಅವರು ಸಲಹೆ ಮಾಡಿದರು.
ಸದಸ್ಯ ಮರಿತಿಬ್ಬೇಗೌಡ ಅವರು ಮಾತನಾಡಿ, ಈ ಕಾಯಿದೆಯನ್ನು ಇನ್ನೊಮ್ಮೆ ಪರಿಶೀಲಿಸಿ, ಸರಳೀಕರಿಸಿ, ಗಡಿಭಾಗದ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ವಾಸ ಮಾಡುವ ಜನರಿಗೆ ಹಣಕಾಸಿನ ನೆರವು ಸಿಗಬೇಕು. ಅಲ್ಲಿನ ಮಕ್ಕಳು ಶೈಕ್ಷಣ ಕವಾಗಿ ಮತ್ತು ಔದ್ಯೋಗಿಕವಾಗಿ ಬೆಳೆಯುವಂತಾಗಬೇಕು ಎಂದರು.
ಗಡಿಭಾಗದ ಜನರಿಗೆ ನಾವು ಕನ್ನಡಿಗರು ಎನ್ನುವ ಭಾವನೆ ಇದೆ. ಇದು ಹೆಮ್ಮೆಯ ವಿಷಯ. ಅವರಿಗೆ ನಾವು ಕರ್ನಾಟಕ ರಾಜ್ಯಕ್ಕೆ ಸೇರಿದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಲು, ಗಡಿಭಾಗದಲ್ಲಿ ನಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಅಂದಾಗ ಮಾತ್ರ ಅವರಲ್ಲಿ ಸುರಕ್ಷತಾ ಭಾವನೆ ಬರಲು ಸಾಧ್ಯವಾಗುತ್ತದೆ ಎಂದು ಸದಸ್ಯೆ ತೇಜಸ್ವಿನಿಗೌಡ ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2010ನ್ನು ಮತ್ತಷ್ಟು ತಿದ್ದುಪಡಿ ಮಾಡಲು ವಿಧೇಯಕದ ಅನುಬಂಧದಲ್ಲಿ ಗುರುತಿಸಿದ ತಾಲೂಕೂಗಳಲ್ಲಿ ಕಾಗವಾಡ ಮತ್ತು ನಿಪ್ಪಾಣ ತಾಲೂಕುಗಳನ್ನು ಸಹ ಸೇರಿಸಬೇಕು ಎಂದು ಸದಸ್ಯ ಪ್ರಕಾಶ್ ಹುಕ್ಕೇರಿ ಮನವಿ ಮಾಡಿದರು.
ಗಡಿಭಾಗದಲ್ಲಿ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಅಲ್ಲಿನ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ವಿಶೇಷ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಬೇಕು ಎಂದು ಸದಸ್ಯರಾದ ಕೆ.ಎಸ್.ನವೀನ ಅವರು ಗೃಹ ಸಚಿವರಲ್ಲಿ ಮನವಿ ಮಾಡಿದರು.