ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟು ಕೊಡುವ ಇರಾದೆ ಇಲ್ಲ. ಹೀಗಾಗಿ ಸಿದ್ದರಾಮಯ್ಯ ತಮ್ಮ ಚೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಸುತ್ತಿದ್ದಾರೆ. ಸಚಿವರಾದ ಮಹದೇವಪ್ಪ, ಎಂ.ಬಿ.ಪಾಟೀಲ್ ಮೂಲಕ ಹೇಳಿಸಿದ್ದಾರೆ. ಸಿದ್ದರಾಮಯ್ಯಗೆ ಪೂರ್ಣವಧಿ ಸಿಎಂ ಅಂತಾ ಹೇಳುವ ಧೈರ್ಯವಿಲ್ಲ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯರನ್ನು ಸಿಎಂ ಮಾಡಿದೆ. ಆದರೆ ಸಿದ್ದರಾಮಯ್ಯಗೆ ಉದಾರತನದ ಮನಸ್ಸು ಇಲ್ಲ ಧೈರ್ಯವಿದ್ದರೆ ಸಿದ್ದರಾಮಯ್ಯ 5 ವರ್ಷ ಸಿಎಂ ನಾನೆ ಅಂತ ಹೇಳಲಿ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿಧಾನಸೌಧದಲ್ಲಿ ಶರ್ಟ್ ಎಳೆದಿದ್ದಾರೆ. ಮತ್ತೊಮ್ಮೆ 5 ವರ್ಷ ಸಿಎಂ ಅಂದರೇ ನಿಮ್ಮ ಕೊರಳ ಪಟ್ಟಿ ಹಿಡಿಯುತ್ತಾರೆ. ಸಿದ್ದರಾಮಯ್ಯ ಅವರಿಗೆ ತಾವೇ ಪೂರ್ಣವಧಿ ಸಿಎಂ ಅಂತ ನೇರವಾಗಿ ಹೇಳುವ ಧೈರ್ಯವಿಲ್ಲ ಅವರಿಗೆ ಪುಕ್ಕಲತನ. ಚುನಾವಣೆ ಗೆಲ್ಲಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ.
ಸಂಸದ ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂ.ಬಿ.ಪಾಟೀಲ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಎಂ.ಬಿ.ಪಾಟೀಲ್ಗೆ ಸಿಕ್ಕಿದ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ಒದ್ದಾಡುತ್ತಿದ್ದಾರೆ. ಎಂ.ಬಿ.ಪಾಟೀಲ್ ಅವರಿಗೆ ಬರೀ ಚಿಲ್ಲರೆ, ನೋಟಿನ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ? ಎಂದು ಎಂ.ಬಿ.ಪಾಟೀಲ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದರು.
ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕರ ಆಯ್ಕೆ ಆಗುತ್ತದೆ. ಎದೆಗಾರಿಕೆ ಇರುವ ನಾಯಕ ಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಎಲ್ಲ ಕಡೆಯೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಕೇಳಿ ಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವ ಎಲ್ಲವನ್ನೂ ಹೊಂದಿರುವ ನಾಯಕಬೇಕು. ಬಸನಗೌಡ ಪಾಟೀಲ್ ಯತ್ನಾಳ್ ಅಂದರೇ ಒಂದು ಹವಾ ಇದೆ ಎಂದರು.