ಮೈಸೂರು: ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ವಾಲ್ಮೀಕಿ ಹಗರಣದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೆ.17ಕ್ಕೆ ವಾಲ್ಮೀಕಿ ಹಗರಣ ವಿಚಾರದಲ್ಲಿ ಪಾದಯಾತ್ರೆ ಮಾಡಲು ನಿರ್ಧಾರವಾಗಿದೆ. ಬೆಳಗಾವಿಯಲ್ಲಿ ನಡೆದದ್ದು ಬಿಜೆಪಿ ಅತೃಪ್ತರ ಬಂಡಾಯಗಾರರ ಸಭೆಯಲ್ಲ. ಬಿಜೆಪಿಯ ಜನಪ್ರಿಯ ನೇತಾರ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆ ಎಂದರು.
ನಾವು ಮೈಸೂರು ಚಲೋ ಪಾದಯಾತ್ರೆ ಅನುಭವದ ಹಂಚಿಕೊಂಡಿದ್ದೇವೆ. ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತೆ. ಬಸನಗೌಡ ಪಾಟೀಲ್ ಯತ್ನಾಳ್‌ರಂತ ಬಹು ದೊಡ್ಡ ನಾಯಕರು ಕರೆದ ಕಾರಣ ನಾನು ಹೋಗಿದ್ದೆ ಎಂದು ಹೇಳಿದರು.
ಈ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಅನುಮತಿಯೊಂದಿಗೆ ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರ ಹಾದಿಯಾಗಿ ಎಲ್ಲರನ್ನು ಪಾದಯಾತ್ರೆಗೆ ಕರೆಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ್ದಾರೆ.