ಬೆಳಗಾವಿ: ಪ್ರತಿಯೊಬ್ಬರ ಉನ್ನತಿಯನ್ನು ಧರ್ಮದ ಮೌಲ್ಯಗಳ ನೆಲೆಗಟ್ಟಿನಲ್ಲಿ ನೋಡಿದಾಗ ಜನಕಲ್ಯಾಣದ ಸಾಧ್ಯತೆಗಳು ಹೆಚ್ಚುತ್ತವೆ ಎಂದು ಮುರಗೋಡದ ದುರದುಂಡೆಶ್ವರ ಮಠದ ಪೀಠಾಧಿಪತಿ ನೀಲಕಂಠ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಮಾರಿಹಾಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಇತ್ತಿಚ್ಚಿಗೆ ಹಮ್ಮಿಕೊಂಡಿದ್ದ ಪೂಜ್ಯರ ಅಮೃತ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ಗ್ರಾಮ ಧರ್ಮ ಜಾಗೃತಿ ಸಭೆಯಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಅವರು , ಒಬ್ಬನ ಉನ್ನತಿಯನ್ನ ಅವನು ಗಳಿಸಿದ ಹಣದ ದೃಷ್ಟಿಕೋನದೊಂದಿಗೂ ಅವರ ಅಭಿವೃದ್ಧಿಯನ್ನು ಅಳೆಯಲಾಗುತ್ತದೆ ಮತ್ತು ಆರ್ಥಿಕತೆಯ ಬೆಳವಣಿಗೆಗಳೂ ಹಣದ ಆಧಾರದಲ್ಲಿಯೇ ನಿರ್ಧಾರಿತವಾಗುತ್ತದೆ.
ಆದರೆ ಇದೆಲ್ಲದರ ಆಚೆಗೆ ಧಾರ್ಮಿಕ ಮೌಲ್ಯಗಳನ್ನು ಕೇಂದ್ರೀಕರಿಸಿಕೊಂಡು ಒಬ್ಬ ವ್ಯಕ್ತಿಯ ಸುಖ ದುಃಖಗಳನ್ನು ಅಳೆದು ನೋಡಿದಾಗ ವ್ಯಕ್ತಿಗಳ ಅಭಿವೃದ್ಧಿ ಸಮಾಜಪರವಾಗಿರುತ್ತದೆ ಇಲ್ಲದಿದ್ದರೆ ವ್ಯಕ್ತಿ ಹಣದಿಂದ ಶ್ರೀಮಂತನಾದರೆ ಸಮಾಜ ಬಡವಾಗುತ್ತೆ ದಿನ ನಿತ್ಯ ಅಹಿತಕರ ವಾತಾವರಣದಿಂದ ಕೂಡಿರುತ್ತದೆ. ಆದ್ದರಿಂದ ಧಾರ್ಮಿಕ ಸಂಸ್ಕಾರ ಅತ್ಯಂತ ಮುಖ್ಯವಾಗಿದೆ ಎಂದರು.
ಪ್ರಸ್ತುತ ಕಾಲಮಾನದಲ್ಲಿಯೂ ಕಷ್ಟದಲ್ಲಿರುವವರಿಗೆ ಸಹಾಯದ ಹಸ್ತ ಚಾಚುವುದು ಉಪಕಾರದ ಶ್ರೇಷ್ಠ ಅವಕಾಶವಾಗಿರುತ್ತದೆ. ಇಂತಹ ಶ್ರೇಷ್ಠ ಅವಕಾಶಗಳನ್ನು ಹಣದ ಶ್ರೀಮಂತಿಕೆಯಲ್ಲಿರುವ ಪ್ರತಿಯೊಬ್ಬರೂ ಬಳಸಿಕೊಳ್ಳುವ ಆಸಕ್ತಿಯನ್ನು ತೋರಿದಾಗ ಮಾತ್ರ ಸಮಾಜದ ಹಿತ ಸಾಧ್ಯ.
ಧರ್ಮದ ಆಚರಣೆಗಳು ತನ್ನದೇ ಆದ ವೈವಿಧ್ಯತೆಗಳನ್ನು ಹೊಂದಿದ್ದರು ಕೂಡ ಪ್ರತಿಯೊಂದು ಧರ್ಮದ ಮೂಲ ತತ್ವ ಮಾನವಧರ್ಮ. ಇಂತಹ ಧರ್ಮ ಪಾಲನೆಯ ತಳಹದಿಯೇ ವ್ಯಕ್ತಿಯ ಸಂಸ್ಕಾರ ಮತ್ತು ಸಚ್ಛಾರಿತ್ರ್ಯತೆ. ಸುಸಂಸ್ಕಾರದ ಜೊತೆ ಉಪಕಾರ ಮನೋಭಾವ ಒಗ್ಗೂಡಿದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಜನಹಿತ, ಸಮಾಜಹಿತ ಮತ್ತು ರಾಷ್ಟದ ಹಿತಕ್ಕಾಗಿ ವಿವೇಚನಾತ್ಮಕವಾಗಿ ಯೋಚಿಸುವ ವ್ಯಕ್ತಿಗತ ಸಂಕಲ್ಪಶಕ್ತಿಯಿಂದಲೇ ಸ್ವಸ್ಥ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಆರ್ಶಿವಚನ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ವೀರ ಭದ್ರಪ್ಪ ಮಾದಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಾಲಿಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬಸಲಿಂಗಯ್ಯ ಪುಜಾರ, ಶಿವಾನಂದ ಹಿತ್ತಲಮನಿ, ಕುಮಾರ ಪೋಜೇರ, ಬಸವರಾಜ ಮಾದಮ್ಮನವರ, ರಾಮಚಂದ್ರ ಪೂಜಾರ,ಚಂದ್ರಯ್ಯ ಸಾಲಿಮಠ, ಮಂಜುಳಾ ಅಲ್ಲಯ್ಯನವರಮಠ, ಬಸವರಾಜ ಕುರಬೆಟ್ಟ, ಶಂಕರಗೌಡ ಪಾಟೀಲ ಇದ್ದರು. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಉಪಸ್ಥಿತರಿದ್ದರು