ಬೆಂಗಳೂರು: ತನಿಖೆಗಳಿಗೆ ಹೆದರಲ್ಲ, ತನಿಖೆ ಎದುರಿಸಲು ತಯಾರಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದರು.
ಮುಡಾ ಹಗರಣ ಪ್ರಕರಣದಲ್ಲಿ (MUDA Scam Case) ತಮ್ಮ ವಿರುದ್ಧ ತನಿಖೆಗೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೋರ್ಟ್ನ ಆದೇಶದ ಪ್ರತಿ ಸಿಕ್ಕಿಲ್ಲ. ಪೂರ್ಣ ಓದಿದ ಮೇಲೆ ರಿಯಾಕ್ಟ್ ಮಾಡ್ತೀನಿ. ತನಿಖೆ ಎದುರಿಸಲು ತಯಾರಿಗಿದ್ದೇವೆ. ತನಿಖೆಗಳಿಗೆ ಹೆದರಲ್ಲ ಎಂದು ತಿಳಿಸಿದರು.
ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚೆ ಮಾಡ್ತೀವಿ. ವಕೀಲರ ಜೊತೆ ಚರ್ಚೆ ಮಾಡ್ತೀನಿ. ಕೇರಳ ಪ್ರವಾಸಕ್ಕೆ ಹೋಗ್ತಿದ್ದೇನೆ. ಆದೇಶದ ಪ್ರತಿ ಪೂರ್ಣ ಓದಿದ ಬಳಿಕ ನಾಳೆ ಬೆಳಗ್ಗೆ ಸಂಪೂರ್ಣ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ನಿನ್ನೆ ಹೈಕೋರ್ಟ್‌ನಲ್ಲಿ ಆದೇಶ ಆಯ್ತು, ತನಿಖೆ ಮಾಡಿ ಅಂತಾ ಹೇಳಿದ್ದಾರೆ. ಅದರ ಅನ್ವಯ ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಆದೇಶ ಮಾಡಿದ್ದಾರೆ. ಪೂರ್ಣ ಆದೇಶ ನೋಡಿದ ಮೇಲೆ ಪ್ರತಿಕ್ರಿಯೆ ನೀಡ್ತೀನಿ. ನಿಮ್ಮ ಕುತೂಹಲ ಅರ್ಥ ಆಗುತ್ತೆ. ನಾನು ಕೇರಳಕ್ಕೆ ಹೋಗ್ತಿದ್ದೇನೆ. ಸಂಜೆ ಆರು ಗಂಟೆಗೆ ಪ್ರತಿ ಸಿಗುತ್ತೆ. ತನಿಖೆಗೆ ಸಿದ್ಧರಿದ್ದೇವೆ, ಎದುರಿಸುತ್ತೇವೆ, ತನಿಖೆಗಳಿಗೆ ಹೆದರುವುದಿಲ್ಲ ಎಂದು ಹೇಳಿದರು.
ನಿನ್ನೆಯೂ ಹೇಳಿದ್ದೀನಿ, ಈಗಲೂ ಪುನರುಚ್ಚರಿಸುತ್ತಿದ್ದೇನೆ. ದೂರುದಾರರು ಮೈಸೂರಿನವರು, ಹೀಗಾಗಿ ಅಲ್ಲೇ ತನಿಖೆ ಆಗಲಿದೆ. ಲೋಕಾಯುಕ್ತ ತನಿಖೆಗೆ ನ್ಯಾಯಾಲಯ ಹೇಳಿದೆ ಎಂದರು.