ಬೆಂಗಳೂರು: ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ಈಗಾಗಲೇ ಹೈಕೋರ್ಟ್ ಅನುಮತಿ ನೀಡಿದ್ದು, ಇದೀಗ ಕೆಂಗೇರಿಯಿಂದ ಮೈಸೂರುವರೆಗೆ ನಡೆಯುವ ಪಾದಯಾತ್ರೆಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಬಿಜೆಪಿ ಪಾದಯಾತ್ರೆಗೆ ಅನುಮತಿಗಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ರಿಟ್ ಅರ್ಜಿ ಸಲ್ಲಿಸಿದ್ದರು. ಆ. 3ರಿಂದ 10ರವರೆಗೆ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆಗೆ ಅನುಮತಿ ಕೇಳಿದರೂ ಸರ್ಕಾರ ಪ್ರತಿಕ್ರಿಯಿಸಿಲ್ಲ. ಹೀಗಾಗಿ ಅನುಮತಿ ನೀಡಲು ನಿರ್ದೇಶಿಸುವಂತೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ನಲ್ಲಿ ಈ ಅರ್ಜಿ ವಿಚಾರಣೆಗೆ ಬರುವ ಮೊದಲೆ ಸರಕಾರ ಪಾದಯಾತ್ರೆಗೆ ಅನುಮತಿ ನೀಡಿದೆ. ಇದೀಗ ಕೋರ್ಟ್, ಕಾನೂನು ಪ್ರಕಾರ ಪಾದಯಾತ್ರೆ ಭದ್ರತೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ರಾಮನಗರ, ಮಂಡ್ಯ ಎಸ್ಪಿ ಹಾಗೂ ಮೈಸೂರು ಪೊಲೀಸ್ರಿಗೆ ಸೂಚಿಸಿದೆ.
ನಾಳೆ ಪಾದಯಾತ್ರೆ ಆರಂಭಗೊಳ್ಳುತ್ತಿದ್ದು, ಕೆಂಗೇರಿಯ ನೈಸ್ ಜಂಕ್ಷನ್ ಬಳಿ ಇರುವ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. 8 ದಿನಗಳ ಕಾಲ ಪಾದಯಾತ್ರೆ ನಡೆಯಲಿದ್ದು, ಮುಂದಿನ ಶನಿವಾರ ಮೈಸೂರು ತಲುಪಲಿದೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಜೆಡಿಎಸ್ ಪಕ್ಷದಿಂದ ಹಾಲಿ, ಮಾಜಿ ಶಾಸಕರು, ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಈ ಮೊದಲು ಪಾದಯಾತ್ರೆಗೆ ಬೆಂಬಲ ಕೊಡಲ್ಲ ಅಂದಿದ್ದ ಕುಮಾರಸ್ವಾಮಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದರ ಮನವೊಲಿಸಲು ಯಶಸ್ವಿಯಾಗಿದ್ದರು. ಇವತ್ತು ಈ ಬಗ್ಗೆ ಮಾತನಾಡಿದ ವಿಜಯೇಂದ್ರ 2 ಪಕ್ಷಗಳು ಒಂದಾಗಿ ಪಾದಯಾತ್ರೆ ನಡೆಯುತ್ತೆ ಅಂತ ತಿಳಿಸಿದ್ದಾರೆ.