ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಯಾದ್ಯಂತ ನಾಲ್ಕು ದಿನಗಳಿಂದ ಭಾರಿ ಮಳೆ ಆಗ್ತಿದ್ದು ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿ ಮಳೆಗೆ ರಸ್ತೆಗಳೆಲ್ಲವೂ ನದಿಗಳಂತಾದ್ರೇ ಇತ್ತ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿವೆ. ತೂಕು ಸೇತುವೆ ಮೇಲೆ ಜನ ಜೀವ ಭಯದಲ್ಲಿ ಓಡಾಡುವಂತಾಗಿದೆ. ಖಾನಾಪುರ ಭಾಗದಲ್ಲಿ ವರುಣ ಅತೀ ಹೆಚ್ಚು ಆರ್ಭಟಿಸುತ್ತಿದ್ದಾನೆ. ಹೀಗಾಗಿ ಖಾನಾಪುರ ತಾಲೂಕಿನ ಶಾಲೆಗಳಿಗೆ ಇಂದು(ಜುಲೈ 22) ರಜೆ ಘೋಷಿಸಲಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಶಾಲೆಗಳಿಗೆ ಇಂದು ರಜೆ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ, ಲೋಂಡಾ, ಜಾಂಬೋಟಿ ಭಾಗದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಕಾಡಂಚಿನ ಮಕ್ಕಳು ಶಾಲೆಗೆ ತೆರಳಲು ಪರದಾಟ ಹಿನ್ನೆಲೆ ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು ಇದರಿಂದ ಜನಜೀವನ ಅಸ್ತವ್ಯಸ್ತತವಾಗಿದೆ. ಇನ್ನೂ ನಿನ್ನೆ ಒಂದೇ ದಿನ ಖಾನಾಪುರ ತಾಲೂಕಿನ ಕಣಕುಂಬಿ ಭಾಗದಲ್ಲಿ 205 ಮೀಲಿ ಮೀಟರ್ ಮಳೆಯಾಗಿದೆ.
ಜಾಂಬೋಟಿಯಲ್ಲಿ 104 ಮೀಲಿ ಮೀಟರ್, ಬೆಳಗಾವಿ ತಾಲೂಕಿನ ರಕ್ಕಸಕೋಪ್ಪದಲ್ಲಿ 90 ಮೀಲಿ ಮೀಟರ್, ಉಚ್ಛಗಾಂವದಲ್ಲಿ 80 ಮೀಲಿ ಮೀಟರ್ ಮಳೆಯಾಗಿದೆ. ಇತ್ತ ಮಲಪ್ರಭಾ ನದಿಯ ನವೀಲು ತೀರ್ಥ ಜಲಾಶಯಕ್ಕೆ 7500 ಕ್ಯೂಸೆಕ್ ನೀರು ಒಳ ಹರಿವಿದ್ರೇ, ಘಟಪ್ರಭಾ ನದಿಯ ಹಿಡಕಲ್ ಜಲಾಶಯಕ್ಕೆ 24 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 85 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಹೀಗಾಗಿ ನದಿ ಪಾತ್ರಕ್ಕೆ ಇಳಿಯದಂತೆ ಪೊಲೀಸರು ನದಿ ಪಾತ್ರದ ಜನರಿಗೆ ಎಚ್ಚರಿಸಿದ್ದಾರೆ.