ಬೆಂಗಳೂರು: ಕರ್ನಾಟಕ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಜೆಡಿಎಸ್ ಪಕ್ಷದಿಂದ ನೈತಿಕ ಬೆಂಬಲ ಘೋಷಣೆ ಮಾಡಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ಮಾಡೋದು ಅನಿವಾರ್ಯ. ಸರ್ಕಾರದ ನಡವಳಿಕೆಯನ್ನು ನೋಡಿದರೆ ಒಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ತಮಿಳುನಾಡಿನಲ್ಲಿ ಈಗಾಗಲೇ ಸಾಕಷ್ಟು ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಆದರೂ ನೀರಿಗಾಗಿ ಖ್ಯಾತೆ ನಡೆಯುತ್ತಿದೆ. ಸರ್ಕಾರ ಯಾವುದೇ ರೀತಿ ರಾಜ್ಯದ ಜನರ ಪರವಾಗಿ ನಿಲುವು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಕಾವೇರಿಗಾಗಿ ಬಂದ್ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. ಇಂದಿನ ಬಂದ್ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ ಹಾಗೂ ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. ಕಾಂಗ್ರೆಸ್ ಸರ್ಕಾರ ಕನ್ನಡ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.