ಬೆಳಗಾವಿ: ಸನ್ 2024-25ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಅನಿರ್ಬಂಧಿತ ಅನುದಾನದ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತಂತೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ರವರು ಎಲ್ಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಅ.8) ರಂದು ವಿಡಿಯೋ ಸಂವಾದ ಮೂಲಕ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ ರಾಜ್ಯ ಹಣಕಾಸು ಆಯೋಗದ ಮಾರ್ಗಸೂಚಿಗಳ ಅನುಸಾರ ಆಯಾ ತಾಲೂಕಿಗೆ ಮಂಜೂರಿಸಲಾದ ಅನುದಾನದಲ್ಲಿ ಶಿಕ್ಷಣ ವಲಯಕ್ಕೆ ಕನಿಷ್ಠ ಪ್ರತಿಶತ 15ರಷ್ಟು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕನಿಷ್ಠ ಪ್ರತಿಶತ 15ರಷ್ಟು, ಆರೋಗ್ಯ ವಲಯಕ್ಕೆ ಕನಿಷ್ಠ ಪ್ರತಿಶತ 10ರಷ್ಟು, ಗ್ರಂಥಾಲಯಗಳ ನಿರ್ಮಾಣ/ನಿರ್ವಹಣೆಗೆ ಕನಿಷ್ಠ ಪ್ರತಿಶತ10 ರಷ್ಟು, ರಸ್ತೆ ಕಾಮಗಾರಿಗಳಿಗೆ ಕನಿಷ್ಠ ಪ್ರತಿಶತ 10ರಷ್ಟು ಮೀಸಲಿಟ್ಟು ಕ್ರಿಯಾ ಯೋಜನೆ ಸಿದ್ದಪಡಿಸುವುದು ಮತ್ತು ಇತರೆ ವಲಯದಲ್ಲಿ ಗ್ರಾಮೀಣ ಮಾರುಕಟ್ಟೆಗಳ ನಿರ್ಮಾಣ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಸಮುದಾಯದ ವಸತಿ ನಿಲಯಗಳ ನಿರ್ವಹಣೆ ದುರಸ್ತಿ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿರುತ್ತದೆ ಎಂದು ಎಲ್ಲ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾನ್ಯರು ಸೂಚಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನಕ್ಕೆ ಸಂಬಂಧಿಸಿದಂತೆ ತಾಲೂಕು/ಜಿಲ್ಲಾ ಪಂಚಾಯತಿ ಕ್ರಿಯಾ ಯೋಜನೆಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಸಂಬಂಧಿಸಿದ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಅತಿ ಅವಶ್ಯವಿರುವ ಕಾಮಗಾರಿಗಳನ್ನು ಗುರುತಿಸುವುದು. ಸದರಿ ಕಾಮಗಾರಿಗಳ ಸ್ಥಳಗಳಿಗೆ ಸಂಬಂಧಿಸಿದಂತೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ C-TARA ತಂತ್ರಾಂಶದಲ್ಲಿ ಛಾಯಾಚಿತ್ರಗಳನ್ನು ಅಳವಡಿಸಿ, ಕಾಮಗಾರಿಯ ನಿಖರ ಅಂದಾಜು ಸಿದ್ಧಪಡಿಸಿ ಕ್ರಿಯಾ ಯೋಜನೆಯನ್ನು ಸಲ್ಲಿಸಲು ಮಾನ್ಯರು ಸೂಚಿಸಿದರು.
ಮಂದುವರೆದು, ಅತಿವೃಷ್ಟಿ/ಪ್ರವಾಹದಲ್ಲಿ ಬಾಧಿತವಾದಂತಹ ಶಾಲೆಗಳು, ಆಸ್ಪತ್ರೆಗಳು ಮತ್ತು ಅಂಗನವಾಡಿ ಕಟ್ಟಡಗಳನ್ನು SDRF ಅನುದಾನದಲ್ಲಿ ದುರಸ್ತಿಗೊಳಿಸಲು ಅವಕಾಶವಿದ್ದು, ಸದರಿ ಕಾಮಗಾರಿಗಳು ಪ್ರಸ್ತುತ ರಾಜ್ಯ ಹಣಕಾಸು ಆಯೋಗದ ಕ್ರಿಯಾ ಯೋಜನೆಯಲ್ಲಿ ಪುನರಾವರ್ತನೆಯಾಗದಂತೆ ಪರಿಶೀಲಿಸಿ ದೃಢೀಕರಿಸಿಕೊಳ್ಳುವುದು ಅಗತ್ಯವಿದ್ದು, ಒಂದೇ ಕಾಮಗಾರಿಯನ್ನು ಬೇರೆ ಬೇರೆ ಕ್ರಿಯಾ ಯೋಜನೆಯಲ್ಲಿಅಳವಡಿಸಿರುವುದು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳನ್ನು ವೈಯಕ್ತಿಕವಾಗಿ ಜವಾಬ್ದಾರರನ್ನಾಗಿಸಿ ನಿರ್ದಾಕ್ಷೀಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದಅನುಷ್ಠಾನ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಮಾತನಾಡಿ ಗ್ರಂಥಾಲಯಕ್ಕೆ ನಿಗದಿಪಡಿಸಲಾದ ಅನುದಾನದಲ್ಲಿ ಸರ್ಕಾರಿ ಜಮೀನು ಲಭ್ಯವಿರುವ ಗ್ರಾಮಗಳಲ್ಲಿ ತಾಲೂಕು ಪಂಚಾಯತಿ ಅನುದಾನದಲ್ಲಿ ಮತ್ತು ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಸೇರಿದಂತೆ 2 ಹೊಸ ಗ್ರಂಥಾಲಯ ನಿರ್ಮಾಣ ಕಾಮಗಾರಿಗಳನ್ನು ಅಳವಡಿಸಲು ಹಾಗೂ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಪ್ರಸ್ತಾಪಿತ ಕಾಮಗಾರಿಯ ಬಗ್ಗೆ (ಉದಾಹರಣೆಗೆ ಅಂಗನವಾಡಿ ದುರಸ್ತಿ ಎಂದು ಹೇಳುವ ಬದಲು ಅಂಗನಾಡಿಗೆ ಸಂಬಂಧಿಸಿದ ನೆಲಹಾಸು/ಅಡುಗೆಕೋಣೆ/ಮೇಲ್ಛಾವಣಿ/ಕಿಟಕಿ-ಬಾಗಿಲು/ವಿದ್ಯುತ್ ಸಂಪರ್ಕ ಇತ್ಯಾದಿಗಳಲ್ಲಿ ಏನು ದುರಸ್ತಿಕೈಗೊಳ್ಳ ಲಾಗುತ್ತಿದೆ ಎಂಬುದನ್ನು) ಸ್ಪಷ್ಟವಾಗಿ ನಮೂದಿಸಲು ಅನುಷ್ಠಾನ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಜಿ.ಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ರಾಮನಗೌಡ ಕನ್ನೋಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮೋಹನ ಕುಮಾರ ಹಂಜಾಟೆ, ಕಾರ್ಯಕಾರಿ ಅಭಿಯಂತರ ಪಂಚಾಯತ ರಾಜ್ ಇಂಜೀನಿಯರಿಂಗ ವಿಭಾಗ ಬೆಳಗಾವಿ ಎಸ್ .ಬಿ ಕೋಳಿ, ಕಾರ್ಯಕಾರಿ ಅಭಿಯಂತರ ಪಂಚಾಯತ ರಾಜ್ ಇಂಜೀನಿಯರಿಂಗ ಚಿಕ್ಕೋಡಿ ವಿಭಾಗ ಪ್ರವೀಣ ಮಠಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ನಾಗರಾಜು ಆರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣ ಅಧಿಕಾರಿ ಶಿವಪ್ರೀಯಾ ಕಡೆಚೂರ, ಜಿಲ್ಲಾಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಡಾ.ಅಬ್ದುಲ್ ಮಿರಜಣ್ಣವರ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆ, ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲೆಯ ಎಲ್ಲ ತಾಲ್ಲೂಕಾ ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.