ನವದೆಹಲಿ: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಆದೇಶದ ಅನ್ವಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿದ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿತ್ತು. ಸಿಬಿಐಗೆ (CBI) ನೀಡಿದ ತನಿಖೆಯನ್ನು ರಾಜ್ಯ ಸರ್ಕಾರ ಹಿಂಪಡೆದಿತ್ತು. ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಯತ್ನಾಳ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸಲಿ. ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದರೆ ಸೂಕ್ತ ಎಂದು ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿ ಎರಡು ಅರ್ಜಿಗಳನ್ನು ವಜಾ ಮಾಡಿತ್ತು. ಈ ಹಿನ್ನೆಲೆ ಸುಪ್ರೀಂಕೋರ್ಟ್‌ಗೆ ಯತ್ನಾಳ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಬಸನಗೌಡ ಯತ್ನಾಳ್ ಅರ್ಜಿ ಸಲ್ಲಿಕೆಗೆ ಮುನ್ನವೇ ಡಿಸಿಎಂ ಡಿಕೆ ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇವಿಯಟ್ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ತಮ್ಮ ಅಭಿಪ್ರಾಯ ಕೇಳದೆ ಯಾವುದೇ ಆದೇಶ ನೀಡಬಾರದು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಚಿಂಚೋಳಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ನಿಯಮಗಳನ್ನು ಉಲ್ಲಂಘಿಸಿರುವ ಕಾರ್ಖಾನೆ ತೆರೆಯಲು ಅನುಮತಿ ನೀಡಬಾರದು ಎಂದು ಅದು ಅರ್ಜಿಯಲ್ಲಿ ಒತ್ತಾಯಿಸಿದೆ. ಪಿಸಿಬಿ ಅರ್ಜಿ ಸಲ್ಲಿಕೆ ಹಿನ್ನೆಲೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಯತ್ನಾಳ್ ಕಾನೂನು ಸಮರಕ್ಕೆ ತಯಾರಿ ನಡೆಸುತ್ತಿದ್ದಾರೆ.