ಬೆಂಗಳೂರು: ಲಿಂಗಾಯತ ವೀರಶೈವ ಸಮುದಾಯದ ಎಲ್ಲ ಉಪ ಪಂಗಡಗಳನ್ನೂ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಒತ್ತಾಯಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾಸಭಾದ ಕಾರ್ಯದರ್ಶಿ ಈಶ್ವರ್ ಖಂಡ್ರೆ , ಬಸವತತ್ವ ಅನುಯಾಯಿಗಳಾದ ಲಿಂಗಾಯತ ವೀರಶೈವರೇ ಇಂದು ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವುದು ನಿಜಕ್ಕೂ ದೌರ್ಭಾಗ್ಯ ಎಂದರು.
ಜನಗಣತಿಯಲ್ಲಿ ಕರ್ನಾಟಕದಲ್ಲಿ ಸುಮಾರು ಶೇ.18ರಿಂದ 20ರಷ್ಟು ಲಿಂಗಾಯತ, ವೀರಶೈವರಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿರುವ ಸಮುದಾಯದಲ್ಲಿ ಲಿಂಗಾಯತ ವೀರಶೈವ ಸಮುದಾಯ ಸೇರುತ್ತದೆ ಎಂದರು.
ಇಂದು ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ಅಥವಾ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ನೇಮಕಾತಿಯೇ ಆಗಿರಲಿ ಇವುಗಳಲ್ಲಿ ಲಿಂಗಾಯತ ಮತ್ತು ವೀರಶೈವ ಸಮುದಾಯದಿಂದ ಆಯ್ಕೆಯಾಗಿ ನೇಮಕಗೊಂಡಿರುವ ಪಾಲು ನಗಣ್ಯ. ಇದಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಈ ಸಮುದಾಯ ಹಿಂದುಳಿದಿರುವುದೇ ಕಾರಣವಾಗಿದೆ ಎಂದರು. ಹೀಗಾಗಿ ಲಿಂಗಾಯತ ವೀರಶೈವ ಸಮುದಾಯದ ಎಲ್ಲ ಉಪ ಪಂಗಡಗಳನ್ನೂ ಓಬಿಸಿ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದೇವೆ ಎಂದರು.