ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗದ ವಿಚಾರ ಕಳೆದ ಕೆಲವು ತಿಂಗಳುಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷವು ಜನರನ್ನು ವಂಚಿಸುತ್ತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಟೀಕಿಸಿದ್ದವು. ಆದರೆ, ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಹಣ ವರ್ಗಾವಣೆಯಾಗುತ್ತಿದೆ. ಖಂಡಿತವಾಗಿಯೂ ಸರ್ಕಾರವು 2000 ರೂ. ವರ್ಗಾವಣೆ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದರು. ಇದೀಗ ಕೊನೆಗೂ ಜೂನ್ ತಿಂಗಳ ಹಣ ಮಹಿಳೆಯರ ಖಾತೆಗಳಿಗೆ ವರ್ಗಾವಣೆಯಾಗಿದೆ.
ಮೂರು ತಿಂಗಳ ಬಳಿಕ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆ ಸೇರಿದೆ. ಆದರೆ, ಬಾಕಿ ಇರುವ ಇನ್ನೆರಡು ತಿಂಗಳ ಹಣ ಖಾತೆ ಸೇರುವುದು ವಿಳಂಬವಾಗಲಿದೆ. ಸದ್ಯ ಜುಲೈ, ಆಗಸ್ಟ್ ತಿಂಗಳ ಹಣ ಖಾತೆಗಳಿಗೆ ವರ್ಗಾವಣೆಯಾಗುವುದು ಬಾಕಿ ಉಳಿದಿದೆ.
ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ಜುಲೈ ತಿಂಗಳ ಬರುವುದು ವಿಳಂಬವಾಗುವ ಸಾಧ್ಯತೆ ಇದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸದ್ಯ ಮಹಿಳಾ ಮತ್ತು ಮಕ್ಕಳ ಇಲಾಖೆಯಯಿಂದ ಈಗಾಗಲೇ ಜುಲೈ ತಿಂಗಳ ಹಣಕ್ಕೆ ಪತ್ರ ಬರೆಯಲಾಗಿದೆ. ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಜುಲೈ ತಿಂಗಳ ಹಣ ಬರುವುದು ತಡವಾಗಲಿದೆ. ಸರ್ಕಾರ ನಮಗೆ ಬೇಗ ಕೊಟ್ಟರೆ ನಾವು ಖಾತೆಗಳಿಗೆ ವರ್ಗಾವಣೆ ಮಾಡುತ್ತೇವೆ. ಆದರೆ, ಸರ್ಕಾರದಿಂದ ಹಣ ಬಿಡುಗಡೆ ಮಾಡುವುದು ತಡವಾಗುತ್ತಿದೆ ಎಂದಿದ್ದಾರೆ.
ಜೂನ್ ತಿಂಗಳಲ್ಲಿ ಎಸ್ಸಿ, ಎಸ್ಟಿ ಫಾಲಾನುಭವಿಗಳ ಪೋರ್ಟಲ್ನಲ್ಲಿ ಒಂದಷ್ಟು ಸಮಸ್ಯೆಗಳು ಕಂಡುಬಂದಿದ್ದವು. ಅವುಗಳನ್ನು ಸರಿಪಡಿಸಿ ಈಗ ಖಾತೆಗೆ ಹಣಹಾಕಲಾಗುತ್ತಿದೆ. ಈ ಮಧ್ಯೆ, ಜೂನ್ ತಿಂಗಳ ಹಣದ ಜತೆಗೇ ಜುಲೈ ಹಣ ಕೂಡ ಬರಲಿದೆ ಎಂದು ಕಾಯುತ್ತಿದ್ದ ಫಾಲಾನುಭವಿಗಳಿಗೆ ನಿರಾಸೆಯಾಗಿದೆ.