“ಗುಲ್ಟು” ಚಿತ್ರದ ಮೂಲಕ ಜನಪ್ರಿಯರಾಗಿ, “ಹೊಂದಿಸಿ ಬರೆಯಿರಿ”, “ಹೊಯ್ಸಳ” ಚಿತ್ರಗಳ ಮೂಲಕ ಅಪಾರ ಜನಮನ್ನಣೆ ಪಡೆದಿರುವ ನಟ ನವೀನ್ ಶಂಕರ್. ಪ್ರಸ್ತುತ ನವೀನ್ ಶಂಕರ್ “ಕ್ಷೇತ್ರಪತಿ” ಚಿತ್ರದಲ್ಲೂ ನಾಯಕರಾಗಿ ನಟಿಸಿದ್ದು, ಈ ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಈ ಚಿತ್ರದ ನವೀನ್ ಶಂಕರ್ ಅವರ ಲುಕ್ ಗೆ ಹಾಗೂ ಟೀಸರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ಮತ್ತು ದ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ (EFG) ಸಹ ನಿರ್ಮಾಣದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ರವಿ ಬಸ್ರುರ್ ಮ್ಯೂಸಿಕ್ & ಮೂವೀಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಖ್ಯಾತ ಕೆ ಆರ್ ಜಿ ಡಿಸ್ಟ್ರಿಬ್ಯೂಟರ್ಸ್ ಬಿಡುಗಡೆ ಮಾಡುತ್ತಿದೆ. “ಕ್ಷೇತ್ರಪತಿ” ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ. ಶ್ರೀಕಾಂತ್ ಕಟಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆ. ಹಾಗಾಗಿ ಹೆಚ್ಚಿನ ಭಾಗದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲೇ ನಡೆದಿದೆ.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಶ್ರೀನಿವಾಸ್ ಬ್ಯಾಡಿಗೆರೆ ಕಾರ್ಯಕಾರಿ ನಿರ್ಮಾಪಕರು ಮತ್ತು ವಿವೇಕ್ ಶ್ರೀಕಂಠಯ್ಯ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದು, ವೈ ವಿ ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಈ ಹಿಂದೆ “ಹೊಂದಿಸಿ ಬರೆಯಿರಿ” ಚಿತ್ರದಲ್ಲಿ ನಾಯಕ – ನಾಯಕಿಯಾಗಿ ನಟಿಸಿ, ಜನಮನ ಗೆದ್ದಿರುವ, ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ “ಕ್ಷೇತ್ರಪತಿ” ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.