ಹೈದರಾಬಾದ್: ತೆಲಂಗಾಣದಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮುಲುಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳಿಗ್ಗೆ 7.27ರ ವೇಳೆಗೆ ರಿಕ್ಟರ್ ಮಾಪನದಲ್ಲಿ 5.3 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ರಾಜಧಾನಿ ಹೈದರಾಬಾದ್ ಸೇರಿದಂತೆ ಇಡೀ ತೆಲಂಗಾಣದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹೇಳಿಕೊಂಡಿದ್ದಾರೆ. 6 ರಿಂದ 9 ಸೆಕೆಂಡುಗಳ ಕಾಲ ನೆಲ ಅದುರಿದೆ ಎನ್ನಲಾಗಿದೆ. ಹೈದರಾಬಾದ್‌ನಿಂದ ಸುಮಾರು 250 ಕಿಮೀ ದೂರ ಇರುವ ಮುಲುಗು ಜಿಲ್ಲೆ ಭೂಕಂಪನದ ಕೇಂದ್ರ ಬಿಂದುವಾಗಿದೆ.
ಈ ಭೂಕಂಪನ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಮನೆ ಹಾಗೂ ಕಟ್ಟಡಗಳ ಒಳಗೆ ಇದ್ದ ಜನರು, ಭಯಭೀತರಾಗಿ ರಸ್ತೆಗಳಿಗೆ ಓಡಿ ಬಂದಿದ್ದಾರೆ. ಆದರೆ ಭೂಕಂಪನದಿಂದ ಈವರೆಗೂ ಯಾವುದೇ ಸಾವು ನೋವು ಅಥವಾ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಜನರು ಜಾಗರೂಕರಾಗಿ ಇರುವಂತೆ ಭೂಕಂಪ ತಜ್ಞರು ಸೂಚನೆ ನೀಡಿದ್ದಾರೆ. ಜನರು ಗುಂಪುಗಳಲ್ಲಿ ನಿಲ್ಲುವುದನ್ನು ತಪ್ಪಿಸಬೇಕು. ಹಾಗೆಯೇ ಅಸುರಕ್ಷಿತ ಎನಿಸುವ ಹಳೆಯ ಮತ್ತು ಶಿಥಿಲ ಕಟ್ಟಡಗಳಿಂದ ದೂರ ಇರಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.