ಬೆಂಗಳೂರು: ನಗರದಲ್ಲಿ ನಾಯಿ ಮಾಂಸದ ವದಂತಿ ಹರಡುತ್ತಿದ್ದಂತೆ, ಮಾಂಸ ಎಂದರೆ ಒಂದು ಕ್ಷಣ ಯೋಚಿಸುವ ಪರಿಸ್ಥಿತಿ ಜನರ ಮನಸ್ಸಲ್ಲಿ ನಿರ್ಮಾಣವಾಗಿದೆ. ಇನ್ನೂ ವದಂತಿ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಿನ ಮಟನ್ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲು ತೀರ್ಮಾನಿಸಿದೆ.
ಮಟನ್ ಸ್ವಚ್ಚತೆ ಮತ್ತು ಅಂಗಡಿಗಳಲ್ಲಿಡೋ ಕೋಲ್ಡ್ ಸ್ಟೋರೇಜ್‌ನಲ್ಲಿರೋ ಮಾಂಸ ಎಷ್ಟು ಸೇಫ್? ಎಂಬ ಬಗ್ಗೆ ಪರಿಶೀಲನೆ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕಾಗಿ ಬೆಂಗಳೂರಿನ ಕೆಲವೆಡೆ ಸ್ಯಾಂಪಲ್‌ಗಳನ್ನು ಸಹ ಸಂಗ್ರಹಿಸಲಾಗಿದೆ. ಇನ್ನೂ ವದಂತಿ ಬೆನ್ನಲ್ಲೇ ಹೋಟೆಲ್ ಮಾಲೀಕರು ಕಳವಳ ವ್ಯಕ್ತಪಡಿಸಿದ್ದು, ತಾವೇ ಖುದ್ದಾಗಿ ಮಾಂಸ ಖರೀದಿಗೆ ಮುಂದಾಗಿದ್ದಾರೆ.
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜಾಗಿದ್ದ ಮಾಂಸ ನಾಯಿಯದ್ದು ಎಂಬ ಆರೋಪವನ್ನು ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ಮಾಡಿದ್ದರು. ಇದೇ ವಿಚಾರವಾಗಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಮಾಂಸವಿದ್ದ ಬಾಕ್ಸ್‌ಗಳನ್ನು ತಡೆದು ಪ್ರತಿಭಟಿಸಿದ್ದರು. ಇದಾದ ಬೆನ್ನಲ್ಲೇ ಮಾಂಸದ ಕ್ವಾಲಿಟಿ ಬಗ್ಗೆ ಪ್ರಶ್ನೆ ಎದ್ದಿದೆ. ಈ ಘಟನೆಯಿಂದ ಅಲರ್ಟ್ ಆಗಿರುವ ಆಹಾರ ಮತ್ತು ಸುರಕ್ಷತಾ ಇಲಾಖೆ ಬೆಂಗಳೂರಿನಲ್ಲಿ ಮಟನ್ ಅಂಗಡಿಗಳ ಪರಿಶೀಲನೆಗೆ ಮುಂದಾಗಿದೆ.
ಬೆಂಗಳೂರಿನ ಎಲ್ಲಾ ಪ್ರದೇಶದ ಮಟನ್ ಅಂಗಡಿಗಳು, ದೊಡ್ಡ ಹೋಟೆಲ್ ಮತ್ತು ದೊಡ್ಡ ಮಟನ್ ಶಾಪ್ ಗಳಲ್ಲಿ ಮಾಂಸವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಶೇಖರಣೆ ಮಾಡ್ತಾರೆ. ಕೋಲ್ಡ್ ಸ್ಟೋರೇಜ್ ಮಾಂಸದ ಕ್ವಾಲಿಟಿ ಚೆಕ್ ಮಾಡಲಿದ್ದಾರೆ. -18 ಡಿಗ್ರಿ ಸೆಲ್ಸಿಯಸ್ ಇದ್ರೆ 8 ರಿಂದ 10 ತಿಂಗಳುಗಳ ಕಾಲ ತಿನ್ನಬಹುದಂತೆ. 4 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಇದ್ರೆ ಮಾಂಸ ಚೆನ್ನಾಗಿರಲಿದೆ. ಹೀಗಾಗಿ ಕೋಲ್ಡ್ ಸ್ಟೋರೇಜ್ ಮಾಡಲಾಗುತ್ತದೆ.