ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಾಲೀಮು ನಡೆಸುತ್ತಿದ್ದು, ಬೆಂಗಳೂರು ಉತ್ತರ ಕ್ಷೇತ್ರ ಗೆಲ್ಲಲು ಡಿಸಿಎಂ ಡಿಕೆ ಶಿವಕುಮಾರ್ ತಂತ್ರ ರೂಪಿಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ 8 ವಿಧಾನಸಭೆ ಕ್ಷೇತ್ರಗಳಿದ್ದು, ಈ ಪೈಕಿ 3 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್, 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಆದರೆ ಬಿಜೆಪಿಯ ಮೂವರು ಶಾಸಕರಾದ ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜು, ಕೆ.ಗೋಪಾಲಯ್ಯಗೆ ಕಾಂಗ್ರೆಸ್ ಗಾಳ ಹಾಕಿದ್ದು, ಘರ್ ವಾಪ್ಸಿ ಮಾಡಿಕೊಳ್ಳಲು ಕಾಂಗ್ರೆಸ್ ಸ್ಕೆಚ್ ಹಾಕಿದೆ.
ಮೂವರು ಶಾಸಕರು ಕಾಂಗ್ರೆಸ್‍ಗೆ ಮರಳಿದರೆ ಕಾಂಗ್ರೆಸ್ ಬಲ ವೃದ್ಧಿಯಾಗಲಿದೆ. ಉಪಚುನಾವಣೆ ಮೂಲಕ ಹಾಲಿ 3:5 ಬಲವನ್ನು, 5:3 ಮಾಡಿಕೊಳ್ಳಲು ತಂತ್ರ ರೂಪಿಸಿದ್ದು, ಮೂವರ ಬಲದಿಂದ ಸುಲಭ ಜಯದ ಲೆಕ್ಕಾಚಾರವನ್ನು ಡಿಕೆಶಿ ಹೆಣೆದಿದ್ದಾರೆ ಎನ್ನಲಾಗಿದೆ. ಮಧ್ಯೆ ಈ ಬಾರಿ ಬಿಜೆಪಿಯಲ್ಲಿ ಹಾಲಿ ಸಂಸದ ಡಿವಿ ಸದಾನಂದ ಗೌಡ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಎಂಬ ಚರ್ಚೆಯೂ ಇದೆ. ಇದು ನಿಜವಾದರೆ, ಕಾಂಗ್ರೆಸ್‍ನಿಂದ ಸಮರ್ಥ ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸಿ ಗೆಲ್ಲುವ ಲೆಕ್ಕಾಚಾರ ಮಾಡಲಾಗಿದೆ. ಜೊತೆಗೆ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ್ದೇ ಪ್ರಾಬಲ್ಯ ಹೆಚ್ಚಾಗಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ದೃಷ್ಟಿಯಿಂದ ಮೊದಲ ಹಂತದ ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಅಧಿಕೃತವಾಗಿಯೇ ಚಾಲನೆ ನೀಡಿದೆ. ನಿರೀಕ್ಷೆಯಂತೆ ಮಾಜಿ ಮಂತ್ರಿ ಎಸ್‍ಟಿ ಸೋಮಶೇಖರ್ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಮೊದಲ ಹಂತದಲ್ಲಿ ಸೋಮವಾರ ಸೋಮಶೇಖರ್ ಆಪ್ತರು, ಮಾಜಿ ಪಾಲಿಕೆ ಸದಸ್ಯರು ಪಕ್ಷ ಸೇರ್ಪಡೆಯಾಗಿದ್ದಾರೆ.
ಎರಡನೇ ಹಂತದಲ್ಲಿ ಹಾಲಿ ಶಾಸಕರ ಸೇರ್ಪಡೆಗೆ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ ಎನ್ನಲಾಗಿದೆ. 2ನೇ ಹಂತದಲ್ಲಿ ಯಶವಂತಪುರ ಶಾಸಕ ಸೋಮಶೇಖರ್ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅವರನ್ನು ನ್ನು ಪಕ್ಷಕ್ಕೆ ಸೇರಿಸಲು ಸಿದ್ಧತೆಗಳು ನಡೆದಿವೆ ಅಂತ ಹೇಳಲಾಗುತ್ತಿದೆ. ಮೂರನೇ ಹಂತದಲ್ಲಿ ಮಾಜಿ ಶಾಸಕರು, ಮಾಜಿ ಸಂಸದರ ಆಪರೇಷನ್‍ಗೆ ಡಿಕೆಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.