ಬೆಳಗಾವಿ : ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲಜೀವನ ಮಿಷನ್ ಯೋಜನೆಯ ಪ್ರಸಕ್ತ ಸಾಲಿನ ನಿಗದಿತ ಗುರಿಯನ್ನು ಮಾರ್ಚ್ ಅಂತ್ಯಕ್ಕೆ ಸಾಧನೆ ಮಾಡಬೇಕು; 2019 ರ ನೆರೆಹಾವಳಿ ಸಂದರ್ಭದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಮನೆ ಒದಗಿಸಬೇಕು; ಶೇ.100 ಗುರಿ ಸಾಧಿಸುವ ಮೂಲಕ ಕೋವಿಡ್ ಲಸಿಕಾಕರಣ ಸಂಪೂರ್ಣ ಯಶಸ್ವಿಗೊಳಿಸಬೇಕು. ಇದಲ್ಲದೇ ಎಲ್ಲ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಶುಕ್ರವಾರ (ಫೆ.25) ನಡೆದ 2021-22ನೇ ಸಾಲಿನ ಮೂರನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಲಜೀವನ ಮಿಷನ್ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಮಾರ್ಚ್ ಅಂತ್ಯದೊಳಗೆ ಪ್ರಸಕ್ತ ವರ್ಷದಲ್ಲಿ ನಿಗದಿತ ಗುರಿ ಸಾಧಿಸಬೇಕು. ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ತಿಳಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಈ ಬಗ್ಗೆ ಮಾಹಿತಿಯನ್ನು ನೀಡಿದ ಜಿಲ್ಲಾ ಪಂಚಾಯತ ಸಿಸಿಓ ದರ್ಶನ್ ಅವರು ಜಿಲ್ಲೆಗೆ ಒಟ್ಟಾರೆ 572 ಕೋಟಿ ಅನುದಾನ ಮಂಜೂರಾಗಿದ್ದು, 248 ಕೋಟಿ ಬಿಡುಗಡೆಗೊಂಡಿದೆ. ಇದರಲ್ಲಿ ಒಟ್ಟು 216 ಕೋಟಿ ಖರ್ಚಾಗಿದೆ ಎಂದು ಹೇಳಿದರು.
ಪ್ರತಿಯೊಂದು ಕಾಮಗಾರಿಯನ್ನು ಸಮರ್ಪಕವಾಗಿ ಹಾಗೂ ತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆಯನ್ನು ನೀಡಬೇಕು. 2019 ರಲ್ಲಿ ನೆರೆಹಾವಳಿ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ ಈಗಾಗಲೇ ಅವಕಾಶವನ್ನು ಕಲ್ಪಿಸಲಾಗಿದೆ. ಒಂದು ವೇಳೆ ಯಾವುದಾದರೂ ಮನೆಗಳು ಉಳಿದುಕೊಂಡಿದ್ದರೆ ಅವುಗಳನ್ನು ಕೂಡ ನಿರ್ಮಿಸಲು ಅನುಕೂಲವಾಗುವಂತೆ ಮರುಸಮೀಕ್ಷೆ ಮಾಡಿ ಲಾಗಿನ್ ಗೆ ಕೂಡ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಮನೆಹಾನಿಗೆ ಸಂಬಂಧಿಸಿದಂತೆ ಹೊಸದಾಗಿ ಅರ್ಜಿಗಳನ್ನು ತರದಂತೆ ಸಲಹೆ ನೀಡಿದರು.
ತಹಶೀಲ್ದಾರರು ಮತ್ತು ಪಿಡಿಓ ಗಳು ಈ ಬಗ್ಗೆ ಪರಿಶೀಲಿಸಿ ಅರ್ಹ ಕುಟುಂಬಗಳಿಗೆ ಮನೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾಗಲಿರುವುದರಿಂದ ಮುಂದಿನ ಒಂದು ವಾರದಲ್ಲಿ ಎಲ್ಲ ಅರ್ಹ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ನೀಡಿ ಶೇ.ನೂರರಷ್ಟು ಸಾಧನೆ ಮಾಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಆಕ್ಸಿಜನ್ ಉತ್ಪಾದನಾ ಘಟಕಗಳು, ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹಾಗೂ ವೈದ್ಯಕೀಯ ಯಂತ್ರೋಪಕರಣಗಳನ್ನು ಪೂರೈಸಲಾಗಿದೆ. ಇವುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಪ್ರತಿಯೊಂದು ಯಂತ್ರೋಪಕರಣಗಳ ವಹಿ ನಿರ್ವಹಿಸಬೇಕು.
ಮಕ್ಕಳ ಸಾವು; ವೈದ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ:
ರಾಮದುರ್ಗದಲ್ಲಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಮೂರು ಮಕ್ಕಳು ಸಾವನ್ನಪ್ಪಿರುವ ಘಟನೆಯನ್ನು ಪ್ರಸ್ತಾಪಿಸಿದ ಸಚಿವ ಗೋವಿಂದ ಕಾರಜೋಳ ಅವರು, ಇದಕ್ಕೆ ಕಾರಣರಾದ ವೈದ್ಯಾಧಿಕಾರಿ ಮೇಲೆ ಕೂಡ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಈ ಬಗ್ಗೆ ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ವರದಿಯನ್ನು ನೀಡಬೇಕು ಎಂದು ಸಚಿವರು ಸೂಚನೆ ನೀಡಿದರು.
ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ಡಿಎಚ್ಓ ಡಾ.ಮುನ್ಯಾಳ ವಿವರಿಸಿದರು.ಲಸಿಕೆಯ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಇನ್ನೂ ವರದಿ ಬಂದಿರುವುದಿಲ್ಲ ಎಂದರು. ಸಮರ್ಪಕವಾಗಿ ಮಾಹಿತಿಯನ್ನು ನೀಡದ ಡಿಎಚ್ಓ ಬಗ್ಗೆ ಅಸಮಾಧಾನಗೊಂಡ ಸಚಿವ ಗೋವಿಂದ ಕಾರಜೋಳ ಅವರು, ಸಭೆಯಲ್ಲಿ ಆರೋಗ್ಯ ಇಲಾಖೆಯ ಆಯುಕ್ತರಿಗೆ ಕರೆ ಮಾಡಿ ಬೇರೆ ಅಧಿಕಾರಿಯನ್ನು ನಿಯೋಜಿಸುವಂತೆ ತಿಳಿಸಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜನೆ ರದ್ದುಗೊಳಿಸಲು ಸೂಚನೆ:
ಆರೋಗ್ಯ ಇಲಾಖೆಯಲ್ಲಿ ಜನರ ಅನುಕೂಲತೆ ದೃಷ್ಟಿಯಿಂದ ಸಿಬ್ಬಂದಿ ನಿಯೋಜಿಸಲಾಗಿರುತ್ತದೆ. ಆರೋಗ್ಯ ಇಲಾಖೆಯಲ್ಲಿನ ಎಲ್ಲ ನಿಯೋಜನೆಗಳನ್ನು ಕೂಡಲೇ ರದ್ದುಪಡಿಸಿ ವರದಿ ನೀಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಶಾಸಕರ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯ ಎಲ್ಲ ಶಾಸಕರು ನಿಗದಿತ ಕಾಲಮಿತಿಯಲ್ಲಿ ಅನುದಾನ ಬಳಕೆ ಮಾಡಬೇಕು ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಮಾಹಿತಿ ಕೊರತೆ; ಸಚಿವರು, ಶಾಸಕರ ಅಸಮಾಧಾನ:
ಆರೋಗ್ಯ, ಕೃಷಿ ಮತ್ತಿತರ ಇಲಾಖೆಯ ಅಧಿಕಾರಿಗಳು ಕೆ.ಡಿ.ಪಿ. ಸಭೆಗೆ ಸಮರ್ಪಕವಾಗಿ ಮಾಹಿತಿಯನ್ನು ಒದಗಿಸಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹಾಗೂ ಅನೇಕ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕೆ.ಡಿ.ಪಿ. ಸಭೆಗೆ ನಿಗದಿತ ಮಾದರಿಯಲ್ಲಿ ಮಾಹಿತಿಯನ್ನು ಒದಗಿಸುವ ಜತೆಗೆ ಇತರೆ ಮಾಹಿತಿಯನ್ನು ಜನಪ್ರತಿನಿಧಿಗಳಿಗೆ ಸರಿಯಾಗಿ ಒದಗಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳು ತಿಳಿಸುವ ಮಾಹಿತಿಗೆ ಹಾಗೂ ಮಾಹಿತಿ ಪುಸ್ತಿಕೆಯಲ್ಲಿ ಮಾಹಿತಿಗೆ ತಾಳೆಯಾಗುವುದಿಲ್ಲ ಎಂದು ತಿಳಿಸಿದರು.ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ತಾಲ್ಲೂಕುಗಳಿಗೆ ಪ್ರವಾಸ ಕೈಗೊಂಡಾಗ ಆಯಾ ಕ್ಷೇತ್ರದ ಶಾಸಕರಿಗೆ ಪ್ರವಾಸ ಕಾರ್ಯಕ್ರಮ ಪಟ್ಟಿ ಒದಗಿಸಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲ ಅರ್ಹ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ಒದಗಿಸಬೇಕು. ಜಿಲ್ಲೆಯ ಒಟ್ಟು ಕುಟುಂಬಗಳ ಆಧಾರದ ಮೇಲೆ ಬಿಪಿಎಲ್ ಕಾರ್ಡುಗಳನ್ನು ವಿತರಣೆ ಆಗಬೇಕು ಎಂದು ಸಚಿವರು ಹೇಳಿದರು.ವಿವಿಧ ವಸತಿ ಯೋಜನೆಯಡಿ ಜಿಲ್ಲೆಗೆ ಮಂಜೂರಾಗಿರುವ ಮನೆಗಳು ಶೇ. ನೂರಕ್ಕೆ ನೂರರಷ್ಟು ಮನೆಗಳನ್ನು ನಿರ್ಮಿಸಬೇಕು. ಯಾವುದೇ ಕಾರಣಕ್ಕೂ ಲ್ಯಾಪ್ಸ್ ಆಗಬಾರದು ಎಂದರು.
ಗಾಂಜಾ-ಮಟ್ಕಾ ದಂಧೆಗೆ ಕಡಿವಾಣ ಹಾಕಲು ಸೂಚನೆ:
ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಬೆಳಗಾವಿ ನಗರ ಮಾತ್ರವಲ್ಲದೇ ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ಹಾಗೂ ಮಟ್ಕಾ ದಂಧೆ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಬಗ್ಗೆ ಪೊಲೀಸ್ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಎಂಟು ದಿನಗಳಲ್ಲಿ ಈ ಅಕ್ರಮ ವ್ಯವಹಾರಕ್ಕೆ ಬ್ರೇಕ್ ಹಾಕಬೇಕು. ಒಂದು ವೇಳೆ ನಿಯಂತ್ರಣಕ್ಕೆ ಬರದಿದ್ದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಈ ಬಗ್ಗೆ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದ್ದು, ಅಧಿಕಾರಿಗಳಿಗೆ ನಿರ್ದೇಶನ ಕೂಡ ನೀಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಪಡಿತರ ಚೀಟಿ ರದ್ದು; ಮರು ಅರ್ಜಿಗೆ ಅವಕಾಶ ಒದಗಿಸಲು ಮನವಿ:
ರದ್ದುಗೊಳಿಸಲಾಗಿರುವ ಪಡಿತರ ಚೀಟಿಗಳನ್ನು ಮರು ಪರಿಶೀಲಿಸಬೇಕು. ಒಂದು ವೇಳೆ ಮರು ಅರ್ಜಿ ಸಲ್ಲಿಸಲು ಅವಕಾಶಗಳಿದ್ದರೆ ಸಂಬಂಧಿಸಿದ ಕುಟುಂಬಗಳಿಗೆ ಈ ಬಗ್ಗೆ ಮಾಹಿತಿಯನ್ನು ಒದಗಿಸಬೇಕು ಎಂದು ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಅಧಿಕಾರಿಗಳಿಗೆ ತಿಳಿಸಿದರು.
ಮೀನುಗಾರಿಕೆ ಇಲಾಖೆಯ ಆವರಣವನ್ನು ಖಾಸಗಿಯವರು ಅತಿಕ್ರಮಣ ಮಾಡಿ ಅನಧಿಕೃತವಾಗಿ ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೂಡಲೇ ಇವುಗಳನ್ನು ತೆರವುಗೊಳಿಸಬೇಕು ಎಂದು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆಒತ್ತಾಯಿಸಿದರು.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಕುರಿತು ಪೊಲೀಸರಿಗೆ ದೂರು ನೀಡಿ ಅಕ್ರಮ ಶೆಡ್ ಗಳನ್ನು ತೆರವುಗೊಳಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಮನೆಗಳ ನಿರ್ಮಾಣ ಕಾಮಗಾರಿ ವಿಳಂಬಗೊಂಡಿದ್ದರೆ ಸಂಬಂಧಿಸಿದ ಗುತ್ತಿಗೆದಾರರಿಗೆ ದಂಡ ವಿಧಿಸುವಂತೆ ಸೂಚನೆ ನೀಡಿದರು.
ಜಲಜೀವನ ಮಿಷನ್ ಯೋಜನೆ ಅನುಷ್ಠಾನ ಹಾಗೂ ಪ್ರಗತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನಿಯಮಿತವಾಗಿ ಮಾಹಿತಿಯನ್ನು ಒದಗಿಸುತ್ತಿಲ್ಲ ಎಂದು ಸಂಸದರಾದ ಮಂಗಳ ಅಂಗಡಿ ಸಚಿವರ ಗಮನಸೆಳೆದರು.
ಇದಕ್ಕೆ ಸ್ಪಂದಿಸಿದ ಸಚಿವರು, ಕೇಂದ್ರ-ರಾಜ್ಯ ಸರಕಾರದ ಯಾವುದೇ ಯೋಜನೆ ಕಾಮಗಾರಿ ಆರಂಭಿಸುವಾಗ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಶಾಸಕರಿಗೆ ಆಹ್ವಾನ ನೀಡುವಂತೆ ತಿಳಿಸಿದರು.
ರಾಮದುರ್ಗ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವೈದ್ಯರು, ನರ್ಸ್ ಸೇರಿದಂತೆ ಅನೇಕ ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ. ಆದಷ್ಟು ಬೇಗನೆ ಖಾಲಿ ಹುದ್ದೆಗಳ ಭರ್ತಿಗೆ ಸಿಬ್ಬಂದಿ ನಿಯೋಜಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಒತ್ತಾಯಿಸಿದರು.
ವಸತಿ ಯೋಜನೆಯಡಿ ಮಂಜೂರಾಗಿ ಅಂದಾಜು 7 ಸಾವಿರ ಮನೆಗಳು ಲ್ಯಾಪ್ಸ್ ಆಗಿರುತ್ತವೆ. ಇವುಗಳನ್ನು ಮರುಸಮೀಕ್ಷೆ ಕೈಗೊಂಡು ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಅವಕಾಶ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ವೈದ್ಯರ ನಿಯೋಜನೆ ರದ್ದುಗೊಳಿಸಲು ಒತ್ತಾಯ:
ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ಜಿಲ್ಲಾ ಆಸ್ಪತ್ರೆಗೆ ನಿಯೋಜಿಸಲಾಗುತ್ತಿದೆ. ಇದರಿಂದ ತಾಲ್ಲೂಕು ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ದೊರಕುತ್ತಿಲ್ಲ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಸಚಿವರು, ಆಯಾ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರನ್ನು ಆಯಾ ಸ್ಥಳದಲ್ಲಿಯೇ ಮುಂದುವರಿಸುವಂತೆ ಸೂಚನೆ ನೀಡಿದರು.ಕಡಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಆದ್ದರಿಂದ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕೈಗೆತ್ತಿಕೊಳ್ಳಲಾಗಿರುವ ಮನೆಗಳ ನಿರ್ಮಾಣ ಕುರಿತು ಶಾಸಕ ಗಣೇಶ ಹುಕ್ಕೇರಿ ಸಭೆಯಲ್ಲಿ ಚರ್ಚೆ ನಡೆಸಿದರು.ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಒಟ್ಟು 7.16 ಲಕ್ಷ ಫಲಾನುಭವಿಗಳಿದ್ದಾರೆ. ಪ್ರತಿವಾರ ಪ್ರಗತಿ ಪರಿಶೀಲನೆ ಕೈಗೊಂಡು ಎಲ್ಲ ಅರ್ಹರಿಗೂ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
2019 ರ ನೆರೆಹಾವಳಿ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳನ್ನು ನಿರ್ಮಾಣಕ್ಕೆ ಸರಕಾರ ನೀಡಿದ ಅವಕಾಶವನ್ನು ಬಳಸಿಕೊಂಡು ಮರುಸಮೀಕ್ಷೆ ಕೈಗೊಂಡು ಲಾಗಿನ್ ಕೂಡ ಮಾಡಲಾಗಿದೆ ಎಂದರು.ಮೂರನೇ ಅಲೆಯಲ್ಲಿ 2.13 ಲಕ್ಷ ಜನರ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೆ ನಡೆಸಲಾಗಿದೆ.
18 ವರ್ಷ ಮೇಲ್ಪಟ್ಟ 36.27 ಲಕ್ಷ ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, ಶೇ.101 ಸಾಧನೆಯಾಗಿದೆ.
ನೆರೆಯ ರಾಜ್ಯ ಹಾಗೂ ಜಿಲ್ಲೆಯ ಕೆಲವು ಜನರು ಕೂಡ ಲಸಿಕೆಯನ್ನು ಪಡೆದುಕೊಂಡಿರುತ್ತಾರೆ.
ಎರಡನೇ ಡೋಸ್ ಲಸಿಕೆಯನ್ನು 34.48 ಲಕ್ಷ ಜನರಿಗೆ ನೀಡಲಾಗಿದೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಸಭೆಯನ್ನು ನಿರ್ವಹಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸ್ವಚ್ಛ ಭಾರತ ಹಾಗೂ ಜಲಜೀವನ ಮಿಷನ್ ಗೆ ಸಂಬಂಧಿಸಿದ ಕ್ಯಾಲೆಂಡರ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಬಿಡುಗಡೆಗೊಳಿಸಿದರು.