ಕರ್ನಾಟಕದ ಉಪಚುನಾವಣೆ ಬಳಿಕ ಇದೀಗ ಮಹಾರಾಷ್ಟ್ರ ಚುನಾವಣಾ ಅಖಾಡಕ್ಕಿಳಿಯಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಜ್ಜಾಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಅಬ್ಬರದ ಮತಬೇಟೆ ನಡೆಸಲಿದ್ದಾರೆ. ಇಂದು ಮೊದಲ ದಿನವಾಗಿದ್ದು ಭೀವಂಡಿ, ಚಾಂಡಿವಾಲಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಪ್ರಚಾರ ಮುಗಿಸಿ ಮತ್ತೆ ಬೆಂಗಳೂರಿಗೆ ವಾಪಸಾಗಲಿದ್ದಾರೆ, ನಾಳೆ(ನವೆಂಬರ್ 16) ಸೊಲ್ಲಾಪುರಕ್ಕೆ ತೆರಳಲಿದ್ದಾರೆ, ನಾಡಿದ್ದು ಮತ್ತೆ ಸರಣಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಜಾಟ್, ಅಕ್ಕಾಲ್ಕೋಟ್,ಸೊಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ನಾಡಿದ್ದು, ಲಾಥೂರ್ ಕ್ಷೇತ್ರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರಚಾರ ಮಾಡಲಿದ್ದಾರೆ.
ಇಂದು ಬೆಳಗ್ಗೆ 9.55ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಮುಂಬೈಗೆ ತೆರಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮುಂಬೈ ಏರ್ಪೋರ್ಟ್ಗೆ ತಲುಪಲಿದ್ದಾರೆ. ಅಲ್ಲಿಂದ ರಸ್ತೆಯ ಮೂಲಕ ಸಾಗಿ ಮುಂಬೈ ವೆಸ್ಟ್ ವಿಧಾನಸಭಾ ಕ್ಷೇತ್ರವಾದಂತ ಭೀವಂಡಿಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಸಂಜೆ 5 ಗಂಟೆಗೆ ಚಾಂಡೀವಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿರುವಂತ ಅವರು, ರಾತ್ರಿ 7.55ಕ್ಕೆ ಮುಂಬೈನಿಂದ ವಿಮಾನದಲ್ಲಿ ಹೊರಟು, ಬೆಂಗಳೂರನ್ನು ರಾತ್ರಿ 9.55ಕ್ಕೆ ತಲುಪಲಿದ್ದಾರೆ. ನ.16ರಂದು ಸೊಲ್ಲಾಪುರದಲ್ಲಿಯೇ ಉಳಿದುಕೊಳ್ಳಲಿದ್ದು, 17ರಂದು ಭಾನುವಾರ ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಲಾತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಮತಪ್ರಚಾರ ನಡೆಸಲಿದ್ದಾರೆ.
ಮಹಾರಾಷ್ಟ್ರದಲ್ಲಿ ಎಂವಿಎ ಮೈತ್ರಿಯೊಂದಿಗೆ ಕಾಂಗ್ರೆಸ್, ಶಿವಸೇನಾ (ಯುಬಿಟಿ) ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎಸ್ಪಿ) ಸ್ಪರ್ಧಿಸುತ್ತಿದೆ. ನವೆಂಬರ್ 20ರಂದು ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಚಾರ ನಡೆಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನವೆಂಬರ್ 20 ರಂದು ರಾಜ್ಯದ 288 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಜಾರ್ಖಂಡ್ ಜೊತೆಗೆ ರಾಜ್ಯದ ಚುನಾವಣಾ ಫಲಿತಾಂಶಗಳು ನವೆಂಬರ್ 23 ರಂದು ಪ್ರಕಟಗೊಳ್ಳಲಿವೆ. ಬಿಜೆಪಿ, ಕಾಂಗ್ರೆಸ್, ಶಿವಸೇನೆ ಮತ್ತು ಎನ್‌ಸಿಪಿಯ ಎರಡೂ ಪಾಳಯಗಳು ಸೇರಿದಂತೆ ಒಟ್ಟು 158 ಪಕ್ಷಗಳು ಉತ್ತರ ಪ್ರದೇಶದ ನಂತರ ದೇಶದ ಎರಡನೇ ಅತಿದೊಡ್ಡ ರಾಜ್ಯ ಚುನಾವಣಾ ಸ್ಪರ್ಧೆಯಲ್ಲಿ ಕಣದಲ್ಲಿವೆ.