ಬೆಳಗಾವಿ: ಸಿ.ಟಿ ರವಿ ಅವರ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಸಿ.ಟಿ ರವಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಬಿಜೆಪಿಯ ಕೊನೆಗಾಲ ಆರಂಭವಾಗಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ನಿಂದನೆ ಆರೋಪ ಹಾಗೂ ಬಂಧನ ಕುರಿತು ಮಾತನಾಡಿ ಸಿಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ ಎಂದಿದ್ದಾರೆ.
ಅಮಿತ್ ಶಾ ಹೇಳಿಕೆಗೆ ದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸದನದಲ್ಲಿ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ನಾಯಕ ಎಂದು ಕೂಗಿದ್ರು. ಪರಿಷತ್ನಲ್ಲಿದ್ದ ನಮ್ಮ ಸದಸ್ಯರ ಬಳಿ ಮಾಹಿತಿ ಪಡೆದೆ, ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದರು. ಇದಕ್ಕೆ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಕಾರು ಅಪಘಾತ ಪ್ರಕರಣ ಪ್ರಸ್ತಾಪಿಸಿ ಕೊಲೆಗಡುಕ ಎಂದಿದ್ದಾರೆ. ಕೊಲೆಗಡುಕ ಎಂದಿದ್ದಕ್ಕೆ ಆ ರೀತಿ ನಿಂದಿಸಿದ್ದು ಸರಿನಾ..? ಸಂಸ್ಕೃತಿ ಹೊಂದಿರುವ ಪಕ್ಷ, ನಾಲಗೆಯಲ್ಲಿ ಆಚಾರ, ವಿಚಾರ ಎಲ್ಲಿದೆ? ಪೊಲೀಸರು ಕಾನೂನು ಕ್ರಮ ಏನಾಗಬೇಕೋ ಅದಾಗುತ್ತೆ ಎಂದು ಹೇಳಿದ್ದಾರೆ.
ಹಿರಿಯ ನಾಯಕರಾಗಿ ಇಂತಹ ಮಾತುಗಳು ಸರಿಯಲ್ಲ. ಅವರನ್ನು ನಂಬಿ ಹಿಂದೆ ನಿಂತ ನಾಯಕರಿಗೂ ಇದು ಶೋಭೆ ತರಲ್ಲ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ತೀವ್ರವಾಗಿ ಖಂಡಿಸುತ್ತೇನೆ. ಬಿಜೆಪಿಯ ಕೊನೆಗಾಲ ಆರಂಭವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ತನ್ನ ವಿರುದ್ಧ ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ಸಿ.ಟಿ ರವಿ ಆರೋಪಕ್ಕೆ ಪ್ರತಿಕ್ರಿಯಿಸಿ, ತಾನು ಮಾಡಿದ ತಪ್ಪು ಮುಚ್ಚಿಕೊಳ್ಳಲು ಸಿಟಿ ರವಿ ಕೊಲೆಗೆ ಯತ್ನ ಆರೋಪ ಮಾಡ್ತಿದ್ದಾರೆ ಅಂತ ತಿಳಿಸಿದ್ದಾರೆ. ಇದೇ ವೇಳೆ ಸಭಾಪತಿಗಳು ಪೊಲೀಸರ ನಡೆಯ ಬಗ್ಗೆಯೂ ಡಿಸಿಎಂ ಅಸಮಾಧಾನ ಹೊರಹಾಕಿದ್ದಾರೆ.