ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 (ಚಿ) ನಲ್ಲಿ ನಡೆದಿದೆ.
ಮುನೀರ್(40), ನಯಾಮತ್ (40), ಮುದ್ದತ್ ಶಿರ್ (12), ರಮಿಜಾ ಬೇಗಂ (50), ಸುಮ್ಮಿ (12) ಮೃತ ದುರ್ದೈವಿಗಳು. ಮೃತಪಟ್ಟ 5 ಮಂದಿ ಸಂಬಂಧಿಕರಾಗಿದ್ದಾರೆ. ಆಂಧ್ರಪ್ರದೇಶದ ಬಂಡಿ ಆತ್ಮಕೂರು ಗ್ರಾಮದ ತಂದೆ ಮುನೀರ್ ಹಾಗೂ ಪುತ್ರ ಮುದ್ದಸಿರ್ ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ವೆಲುಗೋಡ ಗ್ರಾಮದ ಮೂವರು ಸಾವನ್ನಪ್ಪಿದ್ದಾರೆ.
ಕ್ರೂಸರ್, ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾದ ಉರುಸ್ ಜಾತ್ರೆಗೆ ಬರುತ್ತಿತ್ತು. ಈ ವೇಳೆ ಬಳಿಚಕ್ರ ಬಳಿ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಓರ್ವ ಬಾಲಕಿ, ಬಾಲಕ ಸೇರಿ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ. ನಿದ್ದೆ ಮಂಪರ್ ನಲ್ಲಿದ್ದ ಕ್ರೂಸರ್ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಹಿನ್ನೆಲೆ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ 13 ಜನರಿಗೆ ಗಾಯಗಳಾಗಿದ್ದು, ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದವರ ಪೈಕಿ 5 ಜನರ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಘಟನೆ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.