ಬೆಂಗಳೂರು: ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಇದೀಗ ಕಾಂಗ್ರೆಸ್ ಶಾಸಕರು, ಪಕ್ಷದ ಪದಾಧಿಕಾರಿಗಳೇ ಸಿಡಿದೆದ್ದಿದ್ದಾರೆ. ಇದರೊಂದಿಗೆ ಜಮೀರ್ ಅಹ್ಮದ್ ಸ್ವಪಕ್ಷ, ಪ್ರತಿಕ್ಷಗಳ ಕೆಂಗಣ್ಣಿಗೆ ಗುರಿಯಾದಂತಾಗಿದೆ. ಒಂದೆಡೆ, ವಕ್ಫ್ ವಿಚಾರವಾಗಿ ಜಮೀರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಈಗಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇದೀಗ ಕಾಂಗ್ರೆಸ್ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ವಕ್ಫ್ ವಿಚಾರದಲ್ಲಿ ಬಿಜೆಪಿ ನಾಯಕರು ಬಹಿರಂಗವಾಗಿಯೇ ಜಮೀರ್ ವಿರುದ್ಧ ಸಮರ ಸಾರಿದ್ದಾರೆ. ಸಿಎಂ ಸಿದ್ದರಾಮಯ್ಯಗಿಂತಲೂ ಹೆಚ್ಚು ಜಮೀರ್ರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಇತ್ತ ಆಡಳಿತ ಪಕ್ಷದ ಒಳಗೂ ಜಮೀರ್ ವಿರುದ್ಧ ಮೇಲ್ವರ್ಗದ ಶಾಸಕರು, ಸಚಿವರಿಂಧ ಬೇಸರ ವ್ಯಕ್ತವಾಗಿದೆ.
ವಕ್ಫ್ ವಿಚಾರದಿಂದ ಚುನಾವಣೆ ಹೊಸ್ತಿಲಲ್ಲಿ ನಾವೇ ರಾಜಕೀಯ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಕಾಂಗ್ರೆಸ್ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈಗಿನ ಬೆಳವಣಿಗೆಗಳಿಗೆಲ್ಲ ಜಮೀರ್ ಅಹ್ಮದ್ ಸೂಚನೆಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಉಪಚುನಾವಣೆಗೆ ಸಜ್ಜಾಗಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ತಾನೇ ಮುಂದೆ ನಿಂತು ಓಡಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜಮೀರ್ ವಿರುದ್ಧ ಎಐಸಿಸಿ ಅಧ್ಯಕ್ಷರಿಗೆ ದೂರು ನೀಡಿದ ಕೈ ಶಾಸಕರು, ಜಮೀರ್ ಹೇಳಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
ಜಮೀರ್ ಅಹ್ಮದ್ ಪದೇ ಪದೇ ಸರ್ಕಾರಕ್ಕೆ, ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಅನಗತ್ಯ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ, ಸರ್ಕಾರದ ವರ್ಚಸ್ಸಿಗೆ ತೀವ್ರ ಹಾನಿ ಮಾಡುತ್ತಿದ್ದಾರೆ. ಶಿಗ್ಗಾವಿ ಉಪಚುನಾವಣೆ ಅಭ್ಯರ್ಥಿ ವಿಷಯವಾಗಿಯೂ ಅನಗತ್ಯ ಗೊಂದಲ ಸೃಷ್ಟಿ ಮಾಡಿದ್ದರು. ನಮ್ಮಲ್ಲಿ ಸಾಕಷ್ಟು ಅಲ್ಪಸಂಖ್ಯಾತ ಶಾಸಕರಿದ್ದಾರೆ, ಆದರೆ ಜಮೀರ್ ಮಾತ್ರ ವಿಶೇಷವಾಗಿ ನಡೆದುಕೊಳ್ಳುತ್ತಿದ್ದಾರೆ. ತಾವು ಮಧ್ಯಪ್ರವೇಶಿಸಿ ಜಮೀರ್ ಹೇಳಿಕೆಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದೆ ಪಕ್ಷ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಬರಲಿದೆ ಎಂದು ಖರ್ಗೆಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಶಾಸಕರು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಬರೆದಿರವುದು ಎನ್ನಲಾದ ಪತ್ರ ಪ್ರತಿಯೊಂದು ಸದ್ಯ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು ಮತ್ತು ವಕ್ಫ್ ವಿವಾದ ವಿಚಾರವಾಗಿ ಜಮೀರ್ ಅಹ್ಮದ್ ಕಳೆದ ಕೆಲವು ದಿನಗಳಲ್ಲಿ ನೀಡಿರುವ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಈ ವಿಚಾರವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದೆ.